ಜುಬೇರ್ ಹತ್ಯೆ: ಸಚಿವ ಖಾದರ್ ಖಂಡನೆ
ಮಂಗಳೂರು: ಉಳ್ಳಾಲದಲ್ಲಿ ಬುಧವಾರ ನಡೆದ ಜುಬೇರ್ ಹತ್ಯೆಯನ್ನು ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಸಚಿವ ಖಾದರ್ ತನಗೂ ಆತ್ಮೀಯನಾಗಿದ್ದ ಜುಬೇರ್ ಹತ್ಯೆ ಆಘಾತ ತಂದಿದ್ದು, ಜುಬೇರ್ ಹಂತಕರನ್ನು ಶೀಘ್ರವೇ ಬಂದಿಸಲು ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಸಾವ೯ಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಪೊಲೀಸರಿಗೆ ಸಹಕರಿಸಬೇಕು. ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಸಚಿವರು ತಿಳಿಸಿದ್ದಾರೆ.
ಉಳ್ಳಾಲ ಪರಿಸರದಲ್ಲಿ ಸಾವ೯ಜನಿಕರಿಗೆ ಆತಂಕವುಂಟು ಮಾಡುವವರನ್ನು ಮಟ್ಟ ಹಾಕಲು ಸರಕಾರ ಬದ್ಧವಾಗಿದೆ. ಮುಖ್ಯವಾಗಿ ಗಾಂಜಾ ಸೇರಿದಂತೆ ಮಾದಕ ಅಮಲು ಪದಾರ್ಥಗಳ ಮಾರಾಟ ನಿಯಂತ್ರಿಸಲು ವಿದ್ಯಾರ್ಥಿಗಳು, ಸಾವ೯ಜನಿಕರು ಮತ್ತು ಪೊಲೀಸರನ್ನು ಒಳಗೊಂಡ ಮಾದಕ ವಸ್ತು ನಿಯಂತ್ರಣ ದಳ ರಚಿಸಿ, ಗಾಂಜಾ ಚಟುವಟಿಕೆಗಳನ್ನು ಮಟ್ಟ ಹಾಕಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮೆಡಿಕಲ್ ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಅಮಲು ಅಂಶಗಳುಳ್ಳ ಮಾತ್ರೆ, ಔಷಧಿಗಳನ್ನು ಮಾರಾಟ ಮಾಡಿದರೆ ಅಂತಹ ಮೆಡಿಕಲ್ ಗಳ ಲೈಸನ್ಸನ್ನೇ ರದ್ದುಪಡಿಸಲಾಗುವುದು ಎಂದು ಸಚಿವ ಖಾದರ್ ಎಚ್ಚರಿಸಿದ್ದಾರೆ.