ಜುಬೈಲ್: ಸೋಶಿಯಲ್ ಫೋರಂ ನಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ

Spread the love

ಜುಬೈಲ್: ಸೋಶಿಯಲ್ ಫೋರಂ ನಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ

ಜುಬೈಲ್: ಭಾರತದ 71ನೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯು ಅನಿವಾಸಿ ಭಾರತೀಯರಿಗಾಗಿ ಜುಬೈಲ್ ಹೋಟೆಲ್ ಕುಕ್ಸೋನ್ ಸಭಾಂಗಣದಲ್ಲಿ ಇತ್ತೀಚೆಗೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ದಿಕ್ಸೂಚಿ ಭಾಷಣಗೈದ ಇಂಡಿಯನ್ ಸೋಶಿಯಲ್ ಫೋರಂ ಖೋಬರ್ ಬ್ರಾಂಚ್ ಕಾರ್ಯಕಾರಿ ಸಮಿತಿ ಸದಸ್ಯ ನಜೀರ್ ತುಂಬೆ ಮಾತನಾಡಿ, ನಮ್ಮ ದೇಶದಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮದ ಜನರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಸಾಹಿತಿಗಳು, ದಲಿತರು, ಅಲ್ಪಸಂಖ್ಯಾತರು ಹೋರಾಟ ನಡೆಸಿ ಪ್ರಾಣತ್ಯಾಗ ಮಾಡಿದ್ದರು. ಸ್ವತಂತ್ರ ಭಾರತದಲ್ಲೂ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಸಾಹಿತಿಗಳು, ವಿದ್ಯಾರ್ಥಿಗಳು ಆಹಾರದ ಸ್ವಾತಂತ್ರ್ಯ, ಬದುಕುವ ಸ್ವಾತಂತ್ರ್ಯ, ಮಾತನಾಡುವ ಸ್ವಾತಂತ್ರ್ಯಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಸ್ವಾತಂತ್ರ್ಯದ ಅಣಕವಾಗಿದೆ. ಇದರಿಂದಾಗಿಯೇ, 47ರ ಸ್ವಾತಂತ್ರ್ಯ ಯಾರಿಗೆ ಬಂತು? ಎಲ್ಲಿಗೆ ಬಂತು? ಎಂಬ ಪ್ರಶ್ನೆ ಈಗಲೂ ಜನಸಾಮಾನ್ಯರನ್ನು ಕಾಡುತ್ತಿದೆ. ಸಾಮಾಜಿಕ ನ್ಯಾಯವನ್ನು ಖಾತರಿಗೊಳಿಸದ ಹೊರತಾಗಿ ಭಾರತದ ಸ್ವಾತಂತ್ರ್ಯವೂ ಪರಿಪೂರ್ಣವೆನಿಸದು ಎಂದು ತಿಳಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ಎ.ಎಂ. ಆರಿಫ್ ಜೋಕಟ್ಟೆ ಮಾತನಾಡಿ, ದೇಶ ಪ್ರೇಮವೆಂದರೆ ಕೇವಲ ಸರಕಾರವನ್ನು ಪ್ರೀತಿಸುವುದು ಎಂದರ್ಥವಲ್ಲ. ಜನವಿರೋಧಿ ನೀತಿಗಳ ವಿರುದ್ಧ ದನಿಯೆತ್ತಿ, ಸಾಮಾಜಿಕ ನ್ಯಾಯದ ಹೋರಾಟ ರಂಗದಲ್ಲಿ ಇರುವುದು ನಿಜವಾದ ದೇಶಪ್ರೇಮ. ದೇಶದ ಭವಿಷ್ಯದ ಬಗ್ಗೆ ಚಿಂತಿಸುತ್ತಾ, ಅದರ ಎಲ್ಲ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ಈಶ್ಟರ್ನ್ ಪ್ರಾವಿನ್ಸ್ ಅಧ್ಯಕ್ಷ ಅತಾವುಲ್ಲ ಉಚ್ಚಿಲ, ಜುಬೈಲ್ ಇಂಡಿಯನ್ ಸೋಶಿಯಲ್ ಫೋರಂ ಉಪಾಧ್ಯಕ್ಷರಾದ ಇಬ್ರಾಹಿಂ ವೇಣೂರ್ ಉಪಸ್ಥಿತರಿದ್ದರು.

ಸ್ವಾತಂತ್ರೋತ್ಸವದ ಅಂಗವಾಗಿ ಜುಬೈಲ್ ವಿವಿಧ ಕ್ರೀಡಾ ಕೂಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.

ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಶ್ರಫ್ ಕುಕ್ಕಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜುಬೈಲ್ ಇಂಡಿಯನ್ ಸೋಶಿಯಲ್ ಫೋರಂ ಉಪಾಧ್ಯಕ್ಷರಾದ ಇಬ್ರಾಹಿಂ ವೇಣೂರ್ ಧನ್ಯವಾದ ಸಲ್ಲಿಸಿದರು. ಜುಬೈಲ್ ಬ್ರಾಂಚ್ ಸದಸ್ಯ ಮುಹಮ್ಮದ್ ಸಾಮತ್ ಕಾರ್ಯಕ್ರಮ ನಿರೂಪಿಸಿದರು.

ಐಕ್ಯತಾ ಗಾನ ಸಾರೆ ಜಹಾಂಸೆ ಅಚ್ಚಾ ಧ್ವಜ ಗೌರವ ಸೂಚಕದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು, ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಸಭೆ ಕೊನೆಗೊಂಡಿತು.

ಸಾರ್ವಜನಿಕರಿಗೆ ಸ್ವಾತಂತ್ರ್ಯದ ಪ್ರಯುಕ್ತ ಸಿಹಿತಿಂಡಿ ಹಾಗೂ ಲಘು ಉಪಹಾರವನ್ನು ಏರ್ಪಡಿಸಿ ಅನಿವಾಸಿಗರ ನಡುವೆ ಸ್ವಾತಂತ್ರ್ಯೋತ್ಸವದ ಹೊನಲು ಹರಿಸುವಲ್ಲಿ ಸೋಶಿಯಲ್ ಫೋರಂ ಕಾರ್ಯಕ್ರಮವು ಯಶಸ್ವಿಯಾಯಿತು.


Spread the love