Home Mangalorean News Kannada News ಜುಲೈ 20: ಬಿ.ಎ. ಮೊಹಿದೀನ್‍ರಿಗೆ ನುಡಿನಮನ,`ನನ್ನೊಳಗಿನ ನಾನು’ ಆತ್ಮಕಥನ ಬಿಡುಗಡೆ

ಜುಲೈ 20: ಬಿ.ಎ. ಮೊಹಿದೀನ್‍ರಿಗೆ ನುಡಿನಮನ,`ನನ್ನೊಳಗಿನ ನಾನು’ ಆತ್ಮಕಥನ ಬಿಡುಗಡೆ

Spread the love

ಜುಲೈ 20: ಬಿ.ಎ. ಮೊಹಿದೀನ್‍ರಿಗೆ ನುಡಿನಮನ,`ನನ್ನೊಳಗಿನ ನಾನು’ ಆತ್ಮಕಥನ ಬಿಡುಗಡೆ

ಅಗಲಿದ ಮುತ್ಸದ್ದಿ, ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ. ಮೊಹಿದೀನ್‍ರಿಗೆ ನುಡಿನಮನ ಹಾಗೂ ಮುಹಮ್ಮದ್ ಕುಳಾಯಿ ಮತ್ತು ಬಿ.ಎ. ಮುಹಮ್ಮದ್ ಅಲಿ ನಿರೂಪಿಸಿದ ಬಿ.ಎ ಮೊಹಿದೀನ್‍ರ ಆತ್ಮಕಥನ `ನನ್ನೊಳಗಿನ ನಾನು’ ಬಿಡುಗಡೆ ಸಮಾರಂಭ ಜುಲೈ 20, ಶುಕ್ರವಾರದಂದು ಸಂಜೆ 4 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ ವಿವೇಕ ರೈ ಆತ್ಮಕಥನ ಬಿಡುಗಡೆ ಮಾಡಲಿದ್ದಾರೆ. ದಿವಂಗತ ಬಿ.ಎ. ಮೊಹಿದೀನ್‍ರ ಒಡನಾಡಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ಮಾಜಿ ಸಚಿವ ಎಂ.ಸಿ. ನಾಣಯ್ಯ ಭಾಗವಹಿಸಲಿದ್ದಾರೆ.
ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್, ಆಹಾರ ಸಚಿವ ಝಮೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಐವನ್ ಡಿ’ಸೋಜ, ಶಾಸಕ ಡಿ. ವೇದವ್ಯಾಸ ಕಾಮತ್, ಶಿಕ್ಷಣತಜ್ಞ ಬೆಂಗಳೂರಿನ ಪ್ರೊ. ಕೆ.ಇ. ರಾಧಾಕೃಷ್ಣ, ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ, ಕರಾವಳಿ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಎಸ್. ಗಣೇಶ್ ರಾವ್, ಬ್ಯಾರೀಸ್ ಸಂಸ್ಥೆಗಳ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ, ಯೆನೆಪೊಯ ಸಂಸ್ಥೆಗಳ ಮುಖ್ಯಸ್ಥ ವೈ. ಅಬ್ದುಲ್ಲಾ ಕುಂಞÉ, `ವಾರ್ತಾ ಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಟೀಕೇಸ್ ಸಂಸ್ಥೆಗಳ ಮುಖ್ಯಸ್ಥ ಉಮರ್ ಟೀಕೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ವಸಂತ ಆಚಾರಿ ಹಾಗೂ ಎಸ್‍ಡಿಪಿಐ ಜಿಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ನುಡಿನಮನದಲ್ಲಿ ಭಾಗವಹಿಸಲಿದ್ದಾರೆ.

ಆತ್ಮಕಥನದ ಬಗ್ಗೆ
ಬಿ.ಎ. ಮೊಹಿದೀನ್‍ರ `ಆತ್ಮಕಥನ’ ಬರೆಯಬೇಕೆಂದು ನಾವು ಸುಮಾರು ಮೂರು ವರ್ಷಗಳಿಂದ ಅವರ ಬೆನ್ನು ಬಿದ್ದಿದ್ದೆವು. ಆದರೆ ಅವರು ಒಪ್ಪಿರಲಿಲ್ಲ. “ಈಗ ಬೇಡ ಇನ್ನೊಮ್ಮೆ ನೋಡುವ’’ ಎಂದು ತಪ್ಪಿಸುತ್ತಲೇ ಇದ್ದರು. ನಾವು ಒತ್ತ್ತಾಯಿಸಿದರೆ “ನನ್ನದು ಬರೆಯಲು ಏನಿದೆ? ಏನೂ ಇಲ್ಲ’’ ಎಂದು ಮಾತು ಬದಲಿಸುತ್ತಿದ್ದರು. ಬೆಂಗಳೂರಿನ ಇಬ್ಬರು ಪತ್ರಕರ್ತರು ಅವರನ್ನು ಒತ್ತಾಯಿಸಿದಾಗಲೂ ಅವರು ಒಪ್ಪಿರಲಿಲ್ಲ.
ಕಳೆದ ನವೆಂಬರ್‍ನಲ್ಲಿ ಒಂದು ದಿನ ನಾವು ಅವರ ಮುಂದೆ ಕುಳಿತು “ನಿಮ್ಮ ಆತ್ಮಕಥನ ನಿಮಗಾಗಿ ಅಲ್ಲ, ನಿಮ್ಮ ಆದರ್ಶ, ಬದುಕು, ರಾಜಕೀಯ ಇಂದಿನ ರಾಜಕಾರಣಿಗಳಿಗೆ, ಮುಂದಿನ ತಲೆಮಾರಿಗೆ ಮಾದರಿಯಾಗಬೇಕು ಎಂದು ಹೇಳಿ ಕಾಡಿ ಬೇಡಿ ಅವರ ಮನವೊಲಿಸುವಲ್ಲಿ ಸಫಲರಾಗಿದ್ದೆವು. ಪ್ರಾರಂಭದಲ್ಲಿ ಹೇಳಲು ಸ್ವಲ್ಪ ಹಿಂದೇಟು ಹಾಕಿದರೂ ಪ್ರಶ್ನೆಗಳನ್ನು ಕೇಳುತ್ತಿದ್ದಂತೆಯೇ, ನೆನಪನ್ನು ಕೆದಕುತ್ತಿದ್ದಂತೆಯೇ ಅವರು ತೆರೆದುಕೊಳ್ಳ ತೊಡಗಿದರು. ಬಾಲ್ಯ, ಕಾಲೇಜು ಜೀವನ, ಮದುವೆ, ಕುಟುಂಬ, ರಾಜಕೀಯ… ಹೀಗೆ ಅವರ ಬದುಕಿನ ಪ್ರತಿಯೊಂದು ಘಟನೆಯನ್ನು ಯಾವ ಮುಜುಗರವೂ ಇಲ್ಲದೆ ನಮ್ಮ ಮುಂದೆ ಬಿಚ್ಚಿಟ್ಟರು. ಸಮಾಜಕ್ಕೆ, ಸಮುದಾಯಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದ ಅವರು ಎಲ್ಲಿಯೂ ಅದನ್ನು ಈ ಕೃತಿಯಲ್ಲಿ ದಾಖಲಿಸಲು ಬಿಡಲಿಲ್ಲ. “ನಿಮಗೆ `ದೇವರಾಜ ಅರಸು ಪ್ರಶಸ್ತಿ’ ಬಂದಿದೆಯಲ್ಲಾ ಸಾರ್’’ ಎಂದು ಕೇಳಿದ್ದಕ್ಕೆ “ನನಗೆ ಸಿಕ್ಕಿದ ಪ್ರಶಸ್ತಿ, ಸನ್ಮಾನಗಳನ್ನು ದಾಖಲಿಸಲು ಈ ಕೃತಿ ಬರೆಯುವುದಲ್ಲ. ನನ್ನ ಜೀವನಾನುಭವ, ಬದುಕು, ನಾನುಂಡ ನೋವು, ಆದರ್ಶಗಳನ್ನು ದಾಖಲಿಸಲು ಬರೆಯುವುದು’’ ಎಂದು ಖಂಡಿತವಾಗಿಯೂ ಹೇಳಿದ್ದರು. ಎಲ್ಲಿಯೂ ತನ್ನನ್ನು ಹೊಗಳುವುದಾಗಲಿ, ಆತ್ಮರತಿಯಾಗಲಿ ಕೃತಿಯಲ್ಲಿಲ್ಲ. ಅವರು ಸಮಾಜಕ್ಕೆ ಮಾಡಿದ ಸೇವೆಯ ಬಗ್ಗೆ ಕೇಳಿದಾಗ “ನಾನು ಯಾರ ಸೇವೆಯನ್ನೂ ಮಾಡಿಲ್ಲ. ಯಾರಿಗೂ ಉಪಕಾರ ಮಾಡಿಲ್ಲ, ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ. ಅದನ್ನೆಲ್ಲ ಬರೆಯಬೇಡಿ” ಎಂದು ಅಪ್ಪಣೆ ಮಾಡಿದ್ದರು.
ಈ ಕೃತಿಯನ್ನು ಬರೆದು ಅವರ ಮುಂದೆ ಕುಳಿತು ಓದಿದಾಗ ಅವರು ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಅನಂತರ ಅವರು ಬಿಡುಗಡೆಯ ದಿನವನ್ನು ಎದುರು ನೋಡುತ್ತಿದ್ದರು. ಬಿಡುಗಡೆ ಸಮಾರಂಭಕ್ಕೆ ಎಲ್ಲ ಅತಿಥಿಗಳನ್ನು ಅವರೇ ತೀರ್ಮಾನಿಸಿ, ಎಲ್ಲರಿಗೂ ಅವರೇ ಫೋನ್ ಮಾಡಿ ಒಪ್ಪಿಗೆ ಪಡೆದಿದ್ದರು. ಆಮಂತ್ರಣ ಪತ್ರವನ್ನು ನೋಡಿ ಖುಷಿಪಟ್ಟಿದ್ದರು. ಅಂತೂ ಈ ಕೃತಿಯ ಬಗ್ಗೆ ಅವರು ಬಹಳ ನಿರೀಕ್ಷೆಯಲ್ಲಿದ್ದರು.
ಅವರು ನಿಧನರಾಗುವ ಕೊನೆಯ ರಾತ್ರಿ “15ನೇ ತಾರೀಕಿಗೆ ನಾನು ಮಂಗಳೂರಿಗೆ ಬರುತ್ತೇನೆÀ. ಎಲ್ಲ ತಯಾರಿ ಆಗಿದೆಯಾ?” ಎಂದು ಕೇಳಿದ್ದರು.
ಅವರದೇ ಆತ್ಮಕಥನ ಬಿಡುಗಡೆಗೆ ಈಗ ಅವರಿಲ್ಲ. ಆದರೆ ಅವರ ಬದುಕು, ಆದರ್ಶ, ಮೌಲ್ಯಗಳನ್ನು ದಾಖಲಿಸುವ ಮೂಲಕ ಅವರನ್ನು ಜೀವಂತವಿರಿಸಿದ ತೃಪ್ತಿ ನಮಗಿದೆ. ಈಗಾಗಲೇ ಸಾಕಷ್ಟು ಸದ್ದು ಮಾಡಿರುವ ಈ ಕೃತಿಗಾಗಿ ಕನ್ನಡ ಓದುಗರು ಎದುರು ನೋಡುತ್ತಿದ್ದಾರೆ. ನಮಗೆ ಕೃತಿಗಾಗಿ ಬಹಳಷ್ಟು ಬೇಡಿಕೆ ಕರೆಗಳು ಬರುತ್ತಿವೆ. ಕರ್ನಾಟಕದಾದ್ಯಂತ ಈ ಕೃತಿ ಸಿಗುವಂತಹ ವ್ಯವಸ್ಥೆಯನ್ನು ಮಾಡಿದ್ದೇವೆ. ಬಿ.ಎ ಮೊಹಿದೀನ್‍ರಷ್ಟೇ ಅವರ ಕುಟುಂಬದ ಸಹಕಾರ ದೊರೆತುದರಿಂದ ನಮಗೆ ಈ ಕೃತಿ ರಚಿಸಲು ಸಾಧ್ಯವಾಯಿತು. ಹಾಗೆಯೇ ಅವರ ಹಲವಾರು ಗೆಳೆಯರೂ ಈ ಕೃತಿ ರಚಿಸಲು ನಮಗೆ ಸಹಕಾರ ನೀಡಿದ್ದಾರೆ.


Spread the love

Exit mobile version