ಜೂನ್ 11 ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು 3ನೇ ಹಂತದ 400 ಅಭಿಯಾನಗಳ ಸಮಾರೋಪ ಸಮಾರಂಭ
ಮಂಗಳೂರು: ಕೇಂದ್ರ ಸರಕಾರದ ವಿಶೇಷ ವಿನಂತಿಯ ಮೇರೆಗೆ ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದೆರಡೂವರೆ ವರ್ಷಗಳಿಂದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಎಂಬ ಅಭಿಯಾನವನ್ನು ನಿರಂತರವಾಗಿ ಆಯೋಜಿಸಿ ಜನಮಾನಸಕ್ಕೆ ಸ್ವಚ್ಛತೆಯ ಮಹತ್ವವನ್ನು ತಿಳಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಮೂರನೇ ಹಂತದಲ್ಲಿ ಸುಮಾರು ಅರವತ್ತಕ್ಕೂ ಮಿಕ್ಕಿ ತಂಡಗಳು ಬೀದಿಗಿಳಿದು ಸ್ವಚ್ಛತೆಯನ್ನು ಕೈಗೊಂಡು ಜನಜಾಗೃತಿ ಮೂಡಿಸುವಲ್ಲಿ ಶ್ರಮವಹಿಸುತ್ತಿರುವುದು ಹೆಮ್ಮೆಯ ಸಂಗತಿಯೇ ಆಗಿದೆ. ಅಕ್ಟೋಬರ್ 2 2016 ರಂದು 3ನೇ ಹಂತ ಪ್ರಾರಂಭವಾಗಿ ಪ್ರತಿವಾರ ಬಿಡದೇ ನಿರಂತರವಾಗಿ ಇಂದಿನವರೆಗೂ ಅಭಿಯಾನ ಸ್ವಚ್ಛತಾ ಅಭಿಯಾನ ನಡೆಸಿ ಬರುವ ಅದಿತ್ಯವಾರದಂದು ಸಂಪನ್ನಗೊಳ್ಳಲಿದೆ.
ಈ 3ನೇ ಹಂತದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭವನ್ನು ಮಂಗಳಾದೇವಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಇದೇ ಭಾನುವಾರ 11 ಜೂನ್ ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅವರು ವಹಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಎಚ್. ಕೆ. ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಎನ್. ವಿನಯ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯೆ ಮಾನ್ಯ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಜೆ. ಆರ್. ಲೋಬೊ, ಎಮ್. ಆರ್ ಪಿ. ಎಲ್ ನ ನಿರ್ದೇಶಕರಾದ ಶ್ರೀ ಎ. ಕೆ. ಸಾಹೂ ಮತ್ತು ಶ್ರೀ ಬಿ. ಎಚ್. ವಿ ಪ್ರಸಾದ್ ಅವರು ಭಾಗವಹಿಸಲಿದ್ದಾರೆ. ಅಂದು ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರಿಗೆ ಕೃತಜ್ಞತಾ ಸಮರ್ಪಣೆಯೂ ಜರುಗಲಿದೆ.
ಅರ್ಪಣಾ – ಅಂದು ಗ್ರಾಮೀಣ ಪ್ರದೇಶದ ಹಿಂದುಳಿದ ಹಾಗೂ ಬಡ ಜನರಿಗೆ ವಸ್ತ್ರ ವಿತರಣೆಯ ಕಾರ್ಯಕ್ರಮವೂ ಜರುಗುವುದು. ಅಂದು ಸಾಂಕೇತಿಕವಾಗಿ ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಮುಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿಗೆ ತೆರಳಿ ಬಡವರನ್ನು ಗುರುತಿಸಿ ಅವರಿಗೆ ವಸ್ತ್ರವಿತರಣೆ ಮಾಡುವುದರ ಮೂಲಕ ವಿಸ್ತರಿಸಲಾಗುವುದು. ಈ ಬಾರಿ ಸುಮಾರು 10 ಸಾವಿರ ಜನರು ಈ ಅರ್ಪಣಾ ಕಾರ್ಯಕ್ರಮದಿಂದ ಪ್ರಯೋಜನ ಪಡೆಯಲಿದ್ದಾರೆ. ಕಳೆದ ವರ್ಷವೂ ಸುಮಾರು 6000 ಜನರಿಗೆ ಉತ್ತಮ ಗುಣ ಮಟ್ಟದ ವಸ್ತ್ರಗಳನ್ನು ಹಂಚಲಾಗಿತ್ತು.