ಜೂ.15: ಮಿಷನ್ ಆಸ್ಪತ್ರೆಯ ‘ಗ್ರೀನ್ ಹಾಸ್ಪಿಟಲ್ ಯೋಜನೆ’ ಚಾಲನೆ

Spread the love

ಜೂ.15: ಮಿಷನ್ ಆಸ್ಪತ್ರೆಯ ‘ಗ್ರೀನ್ ಹಾಸ್ಪಿಟಲ್ ಯೋಜನೆ’ ಚಾಲನೆ

ಉಡುಪಿ: ಕಳೆದ ಒಂದು ಶತಮಾನದಿಂದ ಉಡುಪಿ ಪರಿಸರದ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಇದೀಗ ಗ್ರೀನ್ ಹಾಸ್ಪಿಟಲ್ ಯೋಜನೆ ‘ಇನ್‌ಸ್ಪಾಯರ್’ನ್ನು ಪ್ರಾರಂಭಿಸಿದ್ದು, ಜೂ.15ರಂದು ಇದಕ್ಕೆ ಚಾಲನೆ ನೀಡಲಾಗುವುದು ಎಂದು ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತ್ತನ್ನ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಭಾರೀ ಸಮಸ್ಯೆಯನ್ನುಂಟುಮಾಡಿರುವ ಹವಾಮಾನ ಬದಲಾವಣೆ ಪರಿಣಾಮಗಳನ್ನು ತಗ್ಗಿಸಲು ನಮ್ಮ ಸಣ್ಣ ಕೊಡುಗೆಯಾಗಿ ಮಿಷನ್ ಆಸ್ಪತ್ರೆಯನ್ನು ಹಸಿರು ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಗುರಿಯನ್ನು ಹಾಕಿ ಕೊಂಡಿದ್ದೇವೆ ಎಂದು ವಿವರಿಸಿದರು.

2050ರ ವೇಳೆಗೆ ಅಂಗಾರಾಮ್ಲದ (ಇಂಗಾಲದ ಡೈ ಆಕ್ಸೈಡ್) ಹೊರಸೂಸುವಿಕೆಯನ್ನು ‘ಶೂನ್ಯ’ಕ್ಕೆ ತರುವ ಗುರಿಯ ಅಂಗವಾಗಿ ದೇಶದ 62 ಆಸ್ಪತ್ರೆಗಳು ಗ್ರೀನ್ ಹಾಸ್ಪಿಟಲ್ ಯೋಜನೆಯ ಜಾರಿಗೆ ಮುಂದಾಗಿದ್ದು, ಕರಾವಳಿಯಲ್ಲಿ ಇಂಥ ಕಾರ್ಯಕ್ಕೆ ಕೈಹಾಕಿದ ಮೊದಲ ಆಸ್ಪತ್ರೆ ನಮ್ಮದಾಗಿದೆ ಎಂದು ಡಾ.ಸುಶಿಲ್ ಜತ್ತನ್ನ ತಿಳಿಸಿದರು.

‘ಇನ್‌ಸ್ಪಾಯರ್’ ಯೋಜನೆಗೆ ಜು.15ರ ಶನಿವಾರ ಬೆಳಗ್ಗೆ 11:00ಕ್ಕೆ ಆಸ್ಪತ್ರೆಯ ಆವರಣದಲ್ಲಿ ನಡೆಯಲಿರುವ ಸಂಸ್ಥೆಯ 101ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು.ಇಡೀ ಆಸ್ಪತ್ರೆ ಆವರಣಕ್ಕೆ ನವೀಕರಿಸಬಹುದಾದ ಇಂಧನ ಒದಗಿಸುವ ಸೌರಫಲಕಗಳ ಅಳವಡಿಕೆಯನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಬಿಷಪ್ ಅ.ವಂ. ಹೇಮಚಂದ್ರಕುಮಾರ್ ಉದ್ಘಾಟಿಸಲಿದ್ದಾರೆ. ಡಾ. ಸುಶಿಲ್ ಜತ್ತನ್ನ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಈಶ್ವರ ಪಿ.ಗಡಾದ್, ನಾಗಾಲ್ಯಾಂಡ್‌ನ ಸಂಗೀತಗಾರ ನೀಸೆ ಮೆರುನೊ, ಸಿಎಸ್‌ಐ ಏರಿಯಾ ಚೇರ್ಮನ್ ವಂ.ಐವನ್ ಡಿ ಸೋನ್ಸ್ ಭಾಗವಹಿಸುವರು.

ಹವಾಮಾನ ಬದಲಾವಣೆ ಮಾನವ ಜೀವಿಸುವ ಭೂಮಿಗೆ ಇಂದು ಎದುರಾಗಿರುವ ಅತಿದೊಡ್ಡ ಸವಾಲಾಗಿದ್ದು, ಆರೋಗ್ಯ ಪೂರೈಕೆದಾರರಾಗಿ ನಾವು ಇದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಅರಿತಿದ್ದೇವೆ. ರೋಗಿಗಳಿಗೆ ಚಿಕಿತ್ಸೆ ನೀಡುವುದರೊಂದಿಗೆ ಪರಿಸರದ ಸವಾಲುಗಳನ್ನು ತಗ್ಗಿಸಲು ನಮ್ಮ ಜವಾಬ್ದಾರಿಯನ್ನು ಅರಿತು ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.

ವಾತಾವರಣದಲ್ಲಿ ಗ್ರೀನ್ ಹೌಸ್ ಅನಿಲಗಳ ಶೇಖರಣೆಯಿಂದ ಉಂಟಾಗುವ ಪರಿಣಾಮಗಳು ಈಗ ನಮ್ಮ ಅರಿವೆಗೆ ಬರುತ್ತಿವೆ. ಇವುಗಳಿಂದ ಭೂಮಿಯ ತಾಪಮಾನ ಹೆಚ್ಚುತಿದ್ದು, ವಾತಾವರಣ ಮೇಲೆ ಅವುಗಳಿಂದ ಆಗುವ ದುಷ್ಪರಿಣಾಮ ಗಳು ಈಗ ನಮ್ಮ ಸುತ್ತ ನಡೆಯುತ್ತಿದೆ. ಬದಲಾದ ಮಳೆಯ ನಮೂನಗಳು, ಏರುತ್ತಿರುವ ಸಮುದ್ರ ನೀರಿನ ಮಟ್ಟ, ಹವಾಮಾನ ವೈಫರಿತ್ಯಗಳು ನಮ್ಮ ಗೋಚರಕ್ಕೆ ಬರುತ್ತಿವೆ ಎಂದು ಡಾ.ಜತ್ತನ್ನ ಹೇಳಿದರು.

ಈ ನಿಟ್ಟಿನಲ್ಲಿ ಲೊಂಬಾರ್ಡ್ ಆಸ್ಪತ್ರೆ ವ್ಯವಸ್ಥಿತ ಮತ್ತು ಸಮಗ್ರ ರೀತಿಯಲ್ಲಿ ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಅಂಶಗಳನ್ನು ಪರಿಹರಿಸಲು ‘ಇನ್‌ಸ್ಪಾಯರ್’ ಹೆಸರಿನ ಕಾರ್ಯರ್ತತ್ರವನ್ನು ರೂಪಿಸಿ ಅದನ್ನು ಅನುಷ್ಠಾನ ಗೊಳಿಸಲು ಕ್ರಮಗಳನ್ನು ಕೈಗೊಂಡಿದ್ದೇವೆ. ಈಗಾಗಲೇ ಇಂಗಾಲದ ಹೊರ ಸೂಸುವಿಕೆಯ ಮಾಪನವನ್ನು ಪ್ರಾರಂಭಿಸಿದ್ದೇವೆ. ಇಂಧನ ಹಾಗೂ ನೀರಿನ ಬಳಕೆಯ ಆಡಿಟ್ ಶೀಘ್ರ ಪ್ರಾರಂಭಗೊಳ್ಳಲಿದೆ ಎಂದರು.

ಆಸ್ಪತ್ರೆ ಈಗಾಗಲೇ ಜೀವವೈವಿಧ್ಯ ಹಾಗೂ ಸುಸ್ಥಿರತೆಯನ್ನು ಹೆಚ್ಚಿಸಲು ಕ್ಯಾಂಪಸ್ ಹಸರೀಕರಣ ಯೋಜನೆ ಜಾರಿಗೊ ಳಿಸಿದ್ದೇವೆ. ನವೀಕರಿಸಬಹು ದಾದ ಇಂಧನ ಬಳಕೆಗಾಗಿ ಸೌರ ವಿದ್ಯುತ್ ಬಳಸುತಿದ್ದೇವೆ. ಸಮಗ್ರ ಜೈವಿಕ ತ್ಯಾಜ್ಯ ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯ ದ ಸಮರ್ಪಕ ನಿರ್ವಹಣೆಯನ್ನು ಉತ್ತೇಜಿಸುತಿದ್ದೇವೆ.ನಮ್ಮ ಕ್ಯಾಂಪಸ್‌ನಲ್ಲಿ ಮಾಲಿನ್ಯ ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದೇವೆ ಎಂದು ಡಾ.ಸುಶಿಲ್ ಜತ್ತನ್ನ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಿಷನ್ ಆಸ್ಪತ್ರೆಯ ಆಡಳಿತಾಧಿಕಾರಿ ಡೀನಾ ಪ್ರಭಾವತಿ, ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಗಣೇಶ ಕಾಮತ್, ಪಿಆರ್‌ಓ ರೋಹಿ ರತ್ನಾಕರ್ ಉಪಸ್ಥಿತರಿದ್ದರು.


Spread the love