ಜೂ. 15 ರ ಒಳಗಡೆ ಬಸ್ಸುಗಳಿಗೆ ಅಳವಡಿಸಿದ ಕರ್ಕಶ ಹಾರ್ನ್ ತೆರವಿಗೆ ಪೊಲೀಸರ ಸೂಚನೆ

Spread the love

ಜೂ. 15 ರ ಒಳಗಡೆ ಬಸ್ಸುಗಳಿಗೆ ಅಳವಡಿಸಿದ ಕರ್ಕಶ ಹಾರ್ನ್ ತೆರವಿಗೆ ಪೊಲೀಸರ ಸೂಚನೆ

ಉಡುಪಿ: ತಮ್ಮ ಬಸ್ಸುಗಳಿಗೆ ಅಳವಡಿಸಲಾದ ಕರ್ಕಶ ಹಾರ್ನ್ ಗಳನ್ನು ಜೂನ್ 15 ರ ಒಳಗಡೆ ತೆಗೆಸುವಂತೆ ಉಡುಪಿ ಸಂಚಾರ ಪೊಲೀಸರು ಸಿಟಿ ಹಾಗೂ ಸರ್ವಿಸ್ ಬಸ್ ಮಾಲಕರಿಗೆ ಕಡ್ಡಾಯವಾಗಿ ಸೂಚನೆ ನೀಡಿದ್ದಾರೆ.

ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಉಡುಪಿ ಸಿಟಿ ಬಸ್ಸು ಮಾಲಕರು ಮತ್ತು ಸರ್ವಿಸ್ ಬಸ್ಸು ಮಾಲಕರ ಸಭೆ ನಡೆದಿದ್ದು ಪೊಲೀಸರು ಬಸ್ಸುಗಳ ಮಾಲಕರಿಗೆ ಹಲವಾರು ಸೂಚನೆಗಳನ್ನು ನೀಡಿದ್ದು ಕಡ್ಡಾಯವಾಗಿ ಪಾಲಿಸಲು ತಿಳಿಸಿದ್ದಾರೆ.

ಬಸ್ಸಿನ ಒಳಗಿನ ಟೇಪ್ ರೆಕಾರ್ಡ್ ಹಾಗೂ ಸ್ಪೀಕರ್ ಗಳನ್ನು ಕಡ್ಡಾಯವಾಗಿ ತೆಗೆಯಲು ಮತ್ತು ಬಸ್ಸಿನ ಒಳಗಡೆ ಕಡ್ಡಾಯವಾಗಿ ಸಿ.ಸಿ ಕ್ಯಾಮಾರವನ್ನು ಅಳವಡಿಸಲು ಸೂಚಿಸಲಾಗಿದೆ. ಬಸ್ಸಿನ ನಿಗದಿತ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಚಲಾಯಿಸುವುದು ಮತ್ತು ಕರಾವಳಿ ಜಂಕ್ಷನ್ ನಲ್ಲಿ ಬಸ್ಸು ನಿಲ್ದಾಣಕ್ಕೆ ಹೋಗದೇ ದಾರಿಯಲ್ಲಿ ಪಿಕ್ ಆಪ್ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಚಾಲಕರು ಬಸ್ಸು ನಿಲ್ದಾಣಕ್ಕೆ ಹೋಗಿ ಪಿಕ್ ಆಪ್ ಮಾಡುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯ ಕಡ್ಡಾಯವಾಗಿ ಸಮವಸ್ತ್ರ ಧರಿಸುವುದು ಮತ್ತು ವಿಪರೀತ ವೇಗವಾಗಿ ಬಸ್ಸುಗಳನ್ನು ಚಲಾಯಿಸದಂತೆ ಚಾಲಕರಿಗೆ ಸೂಚನೆ ನೀಡುವಂತೆ ತಿಳಿಸಲಾಯಿತು. ಬಸ್ಸು ಚಾಲಕರು ಮೊಬೈಲ್ ಪೋನ್ ಉಪಯೋಗಿಸುತ್ತಾ ಬಸ್ಸು ಚಾಲನೆ ಮಾಡದಂತೆ ಸೂಚಿಸುವುದು ಹಾಗೂ ಬಸ್ಸು ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಸೂಚನೆ ನೀಡುವಂತೆ ಮಾಲಕರಿಗೆ ತಿಳಿಸಿದ್ದು ಈ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮತ್ತು ತಪ್ಪಿದ್ದಲ್ಲಿ ಮುಂದೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.


Spread the love