ಜೆಡಿಎಸ್‌ನ ಜಾತ್ಯತೀತ ಮನಸ್ಕರು ಕಾಂಗ್ರೆಸ್ ಸೇರಿ: ರಮಾನಾಥ ರೈ

Spread the love

ಜೆಡಿಎಸ್‌ನ ಜಾತ್ಯತೀತ ಮನಸ್ಕರು ಕಾಂಗ್ರೆಸ್ ಸೇರಿ: ರಮಾನಾಥ ರೈ
 

ಮಂಗಳೂರು: ಜಾತ್ಯತೀತ ಪಕ್ಷವೆಂದು ಹೇಳಿಕೊಂಡು ಬಂದ ಜೆಡಿಎಸ್, ಪ್ರಸ್ತುತ ಬಿಜೆಪಿ ಜತೆ ಹೊಂದಾಣಿಕೆ ಮಾಡುವ ವಿಷಯದಿಂದ ಅತೃಪ್ತರಾಗಿರುವ ಜಾತ್ಯತೀತ ಮನಸ್ಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೊಗಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮನಾಥ ರೈ ಆಹ್ವಾನ ನೀಡಿದ್ದಾರೆ.


ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರುವ ಜಾತ್ಯತೀತ ಮನಸ್ಕರಿಗೆ ಸ್ವಾಗತವಿದ್ದು, ಅವರನ್ನು ಗೌರವದಿಂದ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿ ಜತೆ ಹೊಂದಾಣಿಕೆಗೆ ಮನಸ್ಸಿಲ್ಲದ ಜಿಲ್ಲೆಯ ಬಹಳಷ್ಟು ಮಂದಿ ಜೆಡಿಎಸ್‌ ನಲ್ಲಿದ್ದಾರೆ. ಕೋಮುಸೂಕ್ಷ್ಮ ಎಂಬ ಹಣೆಪಟ್ಟಿ ಕಟ್ಟಿರುವ ದ.ಕ. ಜಿಲ್ಲೆಯಲ್ಲಿ ಜಾತ್ಯತೀತ ಶಕ್ತಿ ಹಾಗೂ ಕೋಮು ಸೌಹಾರ್ದವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳ ಜತೆ ಸೇರಿ ವಿಶೇಷ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಕ್ಕಾಗಿ ಜಾತ್ಯತೀತ ಮನಸ್ಕರ ಅಗತ್ಯವಿದೆ. ಎಲ್ಲರೂ ಒಗ್ಗಟ್ಟಾಗಿ ಕೋಮು ಶಕ್ತಿಗಳ ವಿರುದ್ಧ ಹೋರಾಡುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

ಅನೇಕ ವಿದ್ಯಾಸಂಸ್ಥೆ, ವಿಮಾನ ನಿಲ್ದಾಣ, ಬಂದರು, ಎನ್‌ಐಟಿಕೆ, ಎಂಆರ್‌ಪಿಎಲ್, ಒಎನ್‌ಜಿಸಿ ಸೇರಿದಂತೆ ಹಲವು ಕೊಡುಗೆಗಳು ಜಿಲ್ಲೆಗೆ ಪಕ್ಷದಿಂದ ದೊರಕಿದೆ. ಇಲ್ಲಿಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದು, ಅವರ ಮೇಲೆ ಹಲ್ಲೆ ನಡೆಯುವ ಪ್ರಕ್ರಿಯೆಗಳನ್ನು ಕಂಡಿದ್ದೇವೆ. ಈಗ ಒಂದು ಹಂತದಲ್ಲಿ ನೂತನ ಸರಕಾರದ ಕಠಿಣ ಕ್ರಮಗಳ ಮೂಲಕ ಇವೆಲ್ಲಾ ಹತೋಟಿಗೆ ಬಂದಿವೆ ಎಂದು ಹೇಳಿದರು.

ಜೆಡಿಎಸ್‌ನಿಂದ ಪಕ್ಷಕ್ಕೆ ಸೇರ್ಪಡೆಗೆ ಯಾರಾದರೂ ಜಿಲ್ಲೆಯ ನಾಯಕರು ಮಾತುಕತೆ ನಡೆಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೈ, ಸಭೆ ಸಮಾರಂಭಗಳಲ್ಲಿ ಸಿಗುವ ವೇಳೆ ಅನೌಪಚಾರಿಕವಾಗಿ ಸಾಕಷ್ಟು ಮಂದಿ ಮಾತನಾಡಿದ್ದಾರೆ. ಹಾಗಾಗಿಯೇ ಅವರನ್ನೆಲ್ಲಾ ಮುಕ್ತವಾಗಿ ಆಹ್ವಾನಿಸುತ್ತಿರುವುದಾಗಿ ಹೇಳಿದರು.

ಕಾಂಗ್ರೆಸ್‌ನಿಂದ ಕಳೆದ ಚುನಾವಣೆ ಸಂದರ್ಭ ಜೆಡಿಎಸ್ ಸೇರಿರುವ ಮೊಯ್ದೀನ್ ಬಾವ ಅವರು ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ,  ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ ಎಂದರು.


Spread the love