ಜೇಸಿ ಸಂಸ್ಥೆಯಿಂದ ವಾಯ್ಲೆಟ್ ಪಿರೇರಾ ಸೇರಿದಂತೆ ನಾಲ್ವರು ಸಾಧಕ ಮಹಿಳೆಯರಿಗೆ ಸನ್ಮಾನ

Spread the love

ಜೇಸಿ ಸಂಸ್ಥೆಯಿಂದ ವಾಯ್ಲೆಟ್ ಪಿರೇರಾ ಸೇರಿದಂತೆ ನಾಲ್ವರು ಸಾಧಕ ಮಹಿಳೆಯರಿಗೆ ಸನ್ಮಾನ

ಮಂಗಳೂರು: ಕೆನರಾ ಕಾಲೇಜಿನ ಮಹಿಳೆ ಮತ್ತು ಲಿಂಗತ್ವ ಅಧ್ಯಯನ ಕೇಂದ್ರದ ಹಾಗೂ ಜೇಸಿ ಸಂಸ್ಥೆಯ ಮಂಗಳೂರು ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನವನ್ನು ಕಾಲೇಜಿನಲ್ಲಿ ಗುರುವಾರ ಆಚರಿಸಲಾಯಿತು.

‘ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷೆ ಅಧ್ಯಕ್ಷೆ ವತಿಕಾ ಪೈ ಮಾತನಾಡಿ, ಮಹಿಳೆಯರು ಉದ್ಯಮದಲ್ಲಿ ತೊಡಗಲು ಸಾಕಷ್ಟು ಅವಕಾಶಗಳು ಲಭ್ಯವಾಗಿವೆ. ಸರ್ಕಾರ ಮಹಿಳಾ ಉದ್ಯಮಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಿ ಉತ್ತೇಜಿಸುತ್ತಿದೆ. ಇದರ ಸದುಪಯೋಗವನ್ನು ಇಂದಿನ ಯುವತಿಯರು ಮಾಡಬೇಕು’ ಎಂದು ಸಲಹೆ ನೀಡಿದರು.

ಮಹಿಂದ್ರಾ ಕಂಪನಿಯ ವಾಹನವನ್ನು ಪಡೆದ ಹಳ್ಳಿ ಮನೆ ರೊಟ್ಟೀಸ್‌ನ ಶಿಲ್ಪಾ ಮಾತನಾಡಿ, ‘ತಮ್ಮ ಬದುಕಿನಲ್ಲಿ ಎದುರಿಸಿದ ಕಷ್ಟಕರ ಸನ್ನಿವೇಶಗಳು ಹಾಗೂ ಮಾನಸಿಕ ತುಮುಲಗಳಿಂದ ತಾನು ಹೊರಬಂದು ಸ್ವಉದ್ಯೋಗದಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ಬಗೆಯನ್ನು ವಿವರಿಸಿದರು.

ವಿದ್ಯಾರ್ಹತೆಯು ಇಲ್ಲದಿರುವುದು ತನ್ನ ಸಾಧನೆಗೆ ಎಂದೂ ತೊಡಕಾಗಲಿಲ್ಲ. ಸುಮಾರು ₹300 ತೊಡಗಿಸಿ ಪ್ರಾರಂಭಿಸಿದ ಉದ್ಯಮವು ಇಂದು ಯಶಸ್ವಿಯಾಗಿ ನಡೆಯುತ್ತಿದೆ. ಯಾವುದೇ ಯುವಕ– ಯುವತಿಯರಿಗೂ ತನ್ನ ಉದ್ಯಮದಲ್ಲಿಂದು ಉದ್ಯೋಗವನ್ನು ತಾನು ನೀಡುತ್ತೇನೆ’ ಎಂದು ಆದಿಲಕ್ಷ್ಮಿ ಹೋಮ್ ಇಂಡಸ್ಟ್ರೀಸ್‌ನ ಒಡತಿ ರಾಧಿಕಾ ನಾಯಕ್ ತಿಳಿಸಿದರು.

ಮಂಗಳ ಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಪರಿವರ್ತನ ಚಾರಿಟಬಲ್‌ ಟ್ರಸ್ಟ್ ಸ್ಥಾಪಕಿ ವಾಯ್ಲೆಟ್ ಪಿರೇರಾ, ಮಂಗಳಮುಖಿಯರು ಜೀವನದಲ್ಲಿ ಪಡುತ್ತಿರುವ ಕಷ್ಟಕಾರ್ಪಣ್ಯಗಳನ್ನು ವಿವರಿಸಿ, ಸಮಾಜವು ಅವರನ್ನು ಬೇರೆ ರೀತಿ ಪರಿಗಣಿಸದೇ ಸ್ವೀಕರಿಸಬೇಕು ಎಂದು ಹೇಳಿದರು.

ವತಿಕಾ ಪೈ, ವಾಯ್ಲೆಟ್ ಜೆ. ಪಿರೇರಾ, ಶಿಲ್ಪಾ ಹಾಗೂ ರಾಧಿಕಾ ನಾಯಕ್ ಅವರನ್ನು ಎರಡೂ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ವಿ. ಮಾಲಿನಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಅಧ್ಯಯನ ಕೇಂದ್ರದ ಸಂಚಾಲಕಿ ಪ್ರೊ. ಸೀಮಾ ಪ್ರಭು ಎಸ್. ಸ್ವಾಗತಿಸಿದರು. ಜೇಸಿ ಸಂಸ್ಥೆಯ ಅಧ್ಯಕ್ಷೆ ಶೈಲಜಾ, ಮಹಿಳಾ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಪ್ರೊ. ಧನ್ಯಾ ಶೇಟ್ ನಿರೂಪಿಸಿದರು. ಜೇಸಿ ಸಂಸ್ಥೆಯ ಕಾರ್ಯದರ್ಶಿ ಶ್ವೇತಾ ಜೈನ್ ವಂದಿಸಿದರು.

ಜೇಸಿ ಸದಸ್ಯರಾದ ನೂತನ್, ಮಹೇಶ್ ಕಾಮತ್, ಶೇಷಗಿರಿ ಹಾಗೂ ಜ್ಯೂನಿಯರ್ ಜೇಸಿ ಅಧ್ಯಕ್ಷ ವಿದ್ವತ್ ಜೈನ್ ವೇದಿಕೆಯಲ್ಲಿದ್ದರು. 200 ವಿದ್ಯಾರ್ಥಿನಿಯರು ಭಾಗವಹಿಸಿದ್ದರು.


Spread the love