ಜೈಪುರ: ವಿದ್ಯುತ್ ಸಂಪರ್ಕ ಕಲ್ಪಿಸುವ ಹೈಟೆನ್ಷನ್ ವೈರ್ ಬಸ್ ಮೇಲೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ರಾಜಸ್ಥಾನದ ರಾಜಧಾನಿ ಜೈಪುರದಿಂದ ದಕ್ಷಿಣಕ್ಕೆ ಸುಮಾರು 95 ಕಿಮೀ ದೂರವಿರುವ ಟೊಂಕ್ ಜಿಲ್ಲೆಯ ಪಚೆವಾರ್ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಹೈಟೆನ್ಷನ್ ವೈರ್ ಬಿದ್ದು ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದಾರೆ. ಅಧಿಕಾರಿಗಳ ಪ್ರಕಾರ ಬಸ್ಸಿನಲ್ಲಿದ್ದವರ ಪೈಕಿ ಸುಮಾರು 25 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಪ್ರತ್ಯಕ್ಷ ದರ್ಶಿಗಳ ಪ್ರಕಾರ ದುರಂತಕ್ಕೀಡಾದ ಬಸ್ಸು ಮದುವೆ ಕಾರ್ಯಕ್ರಮಕ್ಕಾಗಿ ಜನರನ್ನು ಒಯ್ಯುತ್ತಿತ್ತು ಎಂದು ತಿಳಿದುಬಂದಿದೆ. ಆದರೆ ದುರಾದೃಷ್ಟವಶಾತ್ ಮಾರ್ಗ ಮಧ್ಯೆ ಬಸ್ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಬ್ಬಿಣದ ತಂತಿಗಳು ಬಿದ್ದ ಪರಿಣಾಮ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಸಜೀವವಾಗಿ ಸುಟ್ಟುಹೋಗಿದ್ದಾರೆ.
ಪ್ರಸ್ತುತ ಘಟನಾ ಸ್ಥಳಕ್ಕೆ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಆಂತಕ ಶುರುವಾಗಿದೆ.ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ರೇಖಾ ಗುಪ್ತಾಲ ಅವರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದಾರೆ.