Home Mangalorean News Kannada News ಜ್ಯೂನಿಯರ್ ಶೆಫ್’ ಖ್ಯಾತಿಯ ಉದಯೋನ್ಮುಖ ಬಾಲ ಪ್ರತಿಭೆ ಝೀಷಾನ್

ಜ್ಯೂನಿಯರ್ ಶೆಫ್’ ಖ್ಯಾತಿಯ ಉದಯೋನ್ಮುಖ ಬಾಲ ಪ್ರತಿಭೆ ಝೀಷಾನ್

Spread the love

ಜ್ಯೂನಿಯರ್ ಶೆಫ್’ ಖ್ಯಾತಿಯ ಉದಯೋನ್ಮುಖ ಬಾಲ ಪ್ರತಿಭೆ ಝೀಷಾನ್

ಪ್ರತಿಯೊಂದು ಮಕ್ಕಳಲ್ಲಿಯೂ ಒಂದೊಂದು ತರಹದ ಪ್ರತಿಭೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಸಮರ್ಪಕ ವೇದಿಕೆಗಳ ಕೊರತೆಯಿಂದಾಗಿ ನಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅಸಾಧ್ಯವಾದರೆ ಇನ್ನೂ ಕೆಲವು ಸಂದರ್ಭಗಳಲ್ಲಿ ನಮ್ಮದೇ ಕೀಳರಿಮೆಯಿಂದಾಗಿ ಅವರ ಪ್ರತಿಭೆಗಳು ಸುಪ್ತವಾಗುತ್ತದೆ. ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ತಕ್ಕದಾದ ವೇದಿಕೆಯನ್ನು ಕಲ್ಪಿಸಿಕೊಟ್ಟರೆ ಮಾತ್ರ ಆ ಪ್ರತಿಭೆಯು ಮುಂದೆ ಬರಲು ಸಾಧ್ಯವಾಗುತ್ತದೆ. ಇದಕ್ಕೊಂದು ಉದಾಹರಣೆಯಾಗಿದ್ದಾನೆ 15ರ ಹರೆಯದ ಉದಯೋನ್ಮುಖ ಬಾಲ ಪ್ರತಿಭೆ ಝೀಷಾನ್.

ಕಾಟಿಪಲ್ಲದ 2ನೇ ಬ್ಲಾಕ್ ನಿವಾಸಿಗಳಾಗಿರುವ ಅಬ್ದುಲ್ ರಾಫಿ ಹಾಗೂ ಝೀನತ್ ದಂಪತಿಗಳ ಸುಪುತ್ರನಾಗಿರುವ ಕಾಟಿಪಲ್ಲದ ಡೆಲ್ಲಿ ಪಬ್ಲಿಕ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಝೀಷಾನ್ ತನ್ನ ಎಳೆಯ ಪ್ರಾಯದಲ್ಲೇ ಜ್ಯೂನಿಯರ್ ಶೆಫ್ ವಿಭಾಗದ ಸ್ಪರ್ಧೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡವನು.

ವಿವಿಧ ತರಹದ ಐಸ್ ಕ್ರೀಂ ಗಳು, ರಷ್ಯನ್ ಸಲಾಡ್, ಕುಲ್ಫಿ ಶೇಕ್, ರಿಂಗ್ ಚೀಸ್ ಸ್ಯಾಂಡ್ ವಿಚ್, ಕಿಟ್ ಕ್ಯಾಟ್ ಓಟ್ಸ್ ಬಾಲ್ ಸೇರಿದಂತೆ ವಿವಿದ ರೀತಿಯ ಖಾದ್ಯಗಳನ್ನು ತಯಾರಿಸುವುದರಲ್ಲಿ ಎತ್ತಿದ ಕೈ ಈ ಬಾಲಕ.

ಕಳೆದ ಮೇ ತಿಂಗಳಲ್ಲಿ ಮಂಗಳೂರು, ಬೆಂಗಳೂರು, ಮೈಸೂರು, ಚೆನ್ನೈ ಹಾಗೂ ಹೈದರಾ ಬಾದ್ ನಲ್ಲಿರುವ ಫೋರಂ ಮಾಲ್ ಗಳಲ್ಲಿ ಏಕ ಕಾಲಕ್ಕೆ ನಡೆದ ಸ್ಥಳದಲ್ಲೇ ಅಡುಗೆ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಅದ್ವಿತೀಯ ಸಾಧನೆಯನ್ನು ಮಾಡಿದ ಝೀಷಾನ್, 2018ನೇ ಆಗಸ್ಟ್ 25ರಂದು ಮಂಗಳೂರಿನ ಅತ್ತಾವರದ ಮಣಿಪಾಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಜ್ಯೂನಿಯರ್ ಶೆಫ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನೂ ಪಡೆದಿದ್ದಾನೆ. ಶೆಫ್ ಸ್ಪರ್ಧೆಗಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಈ ಹುಡುಗನ ಉತ್ಸಾಹ, ಸಾಮಥ್ರ್ಯ ಹಾಗೂ ಚಾಕಚಕ್ಯತೆಗೆ ತಲೆದೂಗದವರಿಲ್ಲ.

ಇದಲ್ಲದೇ ಜ್ಯೂನಿಯರ್ ಶೆಫ್ ವಿಭಾಗದ ಅನೇಕ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿರುವ ಝೀಷಾನ್ ಮುಂದೆ ತಾನೋರ್ವ ಮಾದರಿ ಶೆಫ್ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಎಳೆ ವಯಸ್ಸಿನಲ್ಲೇ ಉದಯೋನ್ಮುಖ ಪ್ರತಿಭೆಯಾಗಲು ದಾಪುಗಾಲಿಡುತ್ತಿರುವ ಝೀಷಾನ್ ಗೆ ಪ್ರೋತ್ಸಾಹವನ್ನು ನೀಡುವುದರೊಂದಿಗೆ ಭವಿಷ್ಯದಲ್ಲಿ ಓರ್ವ ಮಹಾನ್ ಪ್ರತಿಭೆಯಾಗಿ ಹೊರಹೊಮ್ಮಲಿ ಎಂದು ಆಶಿಸೋಣ.


Spread the love

Exit mobile version