ಜ. 10: ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿ
ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘವು ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ಕೊಡಮಾಡುವ 2023ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿಯು ಜನವರಿ 10ರಂದು ಸಂಜೆ 6.30ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿರುವ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ. ಮಿರ್ಜಾ ಬಶೀರ್ ಅವರು ತಮ್ಮ ಅಬ್ರಕಡಬ್ರ (ಕಥಾ ಸಂಕಲನ) ಕೃತಿಗೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಲೆಫ್ಟಿನೆಂಟ್ ಭವ್ಯ ನರಸಿಂಹಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ʼದ್ವೇಷ ರಾಜಕಾರಣ ಮತ್ತು ಪ್ರಜಾತಂತ್ರದ ಭವಿಷ್ಯʼ ಎಂಬ ವಿಷಯದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್. ಅಧ್ಯಕ್ಷತೆ ವಹಿಸಲಿದ್ದಾರೆ.
ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಜಲೀಲ್ ಮುಕ್ರಿ, ಶಮೀಮಾ ಕುತ್ತಾರ್, ಬಶೀರ್ ಅಹ್ಮದ್ ಕಿನ್ಯಾ, ಅಕ್ಷತಾ ರಾಜ್ ಪೆರ್ಲ ಮತ್ತು ಮೌ. ಸೈಯದ್ ಅಹ್ಮದ್ ಖಾಲಿಕ್ ನದ್ವಿ ಭಾಗವಹಿಸಲಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.