ಜ.17-23: ಮಂಗಳೂರು, ಉಡುಪಿಯಲ್ಲಿ ‘ಕರ್ನಾಟಕ ಕ್ರೀಡಾಕೂಟ’
ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ, ದ.ಕ. ಹಾಗೂ ಉಡುಪಿ ಜಿಲ್ಲಾಡಳಿತಗಳ ಸಹಭಾಗಿತ್ವದಲ್ಲಿ ಕರ್ನಾಟಕ ಕ್ರೀಡಾಕೂಟ-2025’ ಜ.17ರಿಂದ 23ರ ತನಕ ಮಂಗಳೂರು ಹಾಗೂ ಉಡುಪಿಯಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ಕರ್ನಾಟಕ ಕ್ರೀಡಾಕೂಟದ ಉನ್ನತಾಧಿಕಾರ ಸಮಿತಿಯ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಹಾಗೂ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಯು.ಟಿ. ಖಾದರ್ ಅವರು ಜ.17ರಂದು ಸಂಜೆ 5 ಗಂಟೆಗೆ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಕ್ರೀಡಾಕೂಟಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿರುವರು. ಸಮಾರೋಪ ಸಮಾರಂಭ ಜ.23ರಂದು ಉಡುಪಿಯ ಅಜ್ಜರಕಾಡು ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಕ್ರೀಡೆಯಲ್ಲಿ ಪುರುಷರು ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಒಟ್ಟು 631 ಚಿನ್ನದ ಪದಕ, 631 ಬೆಳ್ಳಿ ಮತ್ತು 827 ಕಂಚಿನ ಪದಕಗಳಿಗಾಗಿ ಕ್ರೀಡೆಯ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಅಂತರ್ ರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಖಾದರ್ ತಿಳಿಸಿದರು.
ಒಟ್ಟು 25 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದ್ದು, 3,247 ಕ್ರೀಡಾಪಟುಗಳು ಹಾಗೂ 599 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರ ತಂಡ ಸೇರಿದಂತೆ ಒಟ್ಟು 4,250 ಮಂದಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ಮಂಗಳೂರಿನಲ್ಲಿ 1,443 , ಉಡುಪಿಯಲ್ಲಿ 1,373 , ಬೆಂಗಳೂರಿನಲ್ಲಿ 430 ಮಂದಿ ಸ್ಪರ್ಧಾಳುಗಳು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಖಾದರ್ ವಿವರಿಸಿದರು.
ಮಂಗಳೂರಿನಲ್ಲಿ 12 ಕ್ರೀಡೆಗಳು, ಉಡುಪಿಯಲ್ಲಿ 11 ಮತ್ತು ಬೆಂಗಳೂರಿನಲ್ಲಿ 2 ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಮಂಗಳೂರಿನಲ್ಲಿ ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಫೆನ್ಸಿಂಗ್(ಕತ್ತಿವರಸೆ), ಫುಟ್ಬಾಲ್, ಹ್ಯಾಂಡ್‌ಬಾಲ್, ಖೋ ಖೋ, ನೆಟ್‌ಬಾಲ್, ಈಜು, ಟೇಕ್ವಾಂಡೊ, ವಾಲಿಬಾಲ್, ವೇಯ್ಟ್ ಲಿಫ್ಟಿಂಗ್ ಮತ್ತು ವುಶು, ಉಡುಪಿಯಲ್ಲಿ ಆರ್ಚರಿ(ಬಿಲ್ಲುಗಾರಿಕೆ), ಅಥ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಜೂಡೋ, ಕಬಡ್ಡಿ, ಕುಸ್ತಿ, ಕಯಾಕಿಂಗ್ ಆ್ಯಂಡ್ ಕನೋಯಿಂಗ್ , ಮಣಿಪಾಲದಲ್ಲಿ ಲಾನ್ ಟೆನ್ನಿಸ್ ಮತ್ತು ಟೇಬಲ್ ಟೆನ್ನಿಸ್, ಬೆಂಗಳೂರಿನಲ್ಲಿ ಜಿಮ್ನಾಸ್ಟಿಕ್ ಮತ್ತು ಶೂಟಿಂಗ್ ಕ್ರೀಡೆಗಳನ್ನು ಆಯೋಜಿಸಲಾಗುವುದು ಎಂದು ಖಾದರ್ ಹೇಳಿದರು.
ಕ್ರೀಡೆಯೊಂದಿಗೆ ದ.ಕ. ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಪ್ರಯತ್ನ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ, ವಿವಿಧ ಅಕಾಡೆಮಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲು ಕೈಜೋಡಿಸಲಿದೆ ಎಂದರು.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಹಕಾರಿಯಾಗಲಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಈ ಕ್ರೀಡಾಕೂಟದ ಆಯೋಜನೆಗೆ 2024-25ನೇ ಸಾಲಿನ ಕ್ರೀಯಾ ಯೋಜನೆಯಲ್ಲಿ 5 ಕೋಟಿ ರೂ. ನೀಡಿದೆ. ಕ್ರೀಡಾಕೂಟವನ್ನು ಯಶಸ್ವಿಯಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸಲು 7 ಸಮಿತಿಗಳನ್ನು ರಚಿಸಲಾಗಿದೆ. ಎಂದರು.
ಮಂಗಳೂರಿನಲ್ಲಿ ನಡೆಯಲಿರುವ ಕ್ರೀಡಾಕೂಟಗಳಿಗೆ ವಸತಿಗೆ ಸಂಬಂಧಿಸಿ ಹೋಟೆಲ್‌ಗಳಲ್ಲಿ 630 ರೂಂಗಳನ್ನು ಕಾಯ್ದಿರಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು. ಉಡುಪಿಯಲ್ಲಿ ನಡೆಯಲಿರುವ ಕ್ರೀಡಾಕೂಟಗಳಿಗೆ ಕ್ರೀಡಾಪಟುಗಳಿಗೆ ಮಣಿಪಾಲದ ಹಾಸ್ಟೆಲ್‌ನಲ್ಲಿ ಮತ್ತು ಅಧಿಕಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕ್ರೀಡೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಲ ಬಜೆಟ್‌ನಲ್ಲಿ ಕ್ರೀಡೆಗೆ ಹೆಚ್ಚು ಅನುದಾನ ಮೀಸಲಿರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ಅಧ್ಯಕ್ಷ ಡಾ.ಕೆ. ಗೋವಿಂದರಾಜು ತಿಳಿಸಿದರು.
ಕ್ರೀಡಾಪಟುಗಳಿಗೆ ಸರಕಾರಿ ಉದ್ಯೋಗದಲ್ಲಿ ಶೇ 2ರಷ್ಟು ಮೀಸಲಾತಿ ನೀಡಲಾಗುತ್ತಿದೆ. ದೇಶದಲ್ಲಿ ಎಲ್ಲೂ ಈ ರೀತಿಯ ಮೀಸಲಾತಿ ನೀಡಿಲ್ಲ. ಕ್ರೀಡೆಯ ಕೋಟಾದಲ್ಲಿ 119 ಮಂದಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಆಗಿದೆ. ಒಲಿಂಪಿಕ್ಸ್, ಏಶ್ಯನ್ ಗೇಮ್ಸ್ , ಕಾಮನ್‌ವೆಲ್ತ್‌ನಲ್ಲಿ ಜಯಿಸಿದವರಿಗೆ 12 ಮಂದಿ ನೇರ ನೇಮಕಾತಿ ಮೂಲಕ ಕ್ಲಾಸ್ ಒನ್, ಕ್ಲಾಸ್ ಟು ಅಧಿಕಾರಿಗಳ ಹುದ್ದೆ ನೀಡಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮತ್ತಿತರರು ಉಪಸ್ಥಿತರಿದ್ದರು.