ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿಯಿಂದ ಸಮುದಾಯೋತ್ಸವ – 2020
ಉಡುಪಿ: ಕೆಥೊಲಿಕ್ ಉಡುಪಿ ಪ್ರದೇಶ್ ಇದರ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 2020 ಜನವರಿ 19ರಂದು ಕಲ್ಯಾಣಪುರದ ಮೌಂಟ್ ರೋಜರಿ ಚರ್ಚಿನ ಮೈದಾನದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಚಾರಿತ್ರಿಕ ಸಮ್ಮೇಳನ ಸಮುದಾಯೋತ್ಸವ-2020 ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ 1979ರ ಏಪ್ರಿಲ್ 29ರಂದು ಉಡುಪಿ ಚರ್ಚಿನ ಡೋನ್ ಬೊಸ್ಕೊ ಸಭಾಂಗಣದಲ್ಲಿ ಅಂದಿನ ಮಂಗಳೂರಿನ ಧರ್ಮಾಧ್ಯಕ್ಷ ಅ|ವಂ|ಡಾ| ಬಾಜಿಲ್ ಸಾಲ್ವದೊರ್ ಡಿಸೋಜಾರ ಅಮೃತ ಹಸ್ತದಿಂದ ಆರಂಬಗೊಂಡ ಕೆಥೊಲಿಕ್ ಸಭಾ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ, ತ್ಯಾಗ ಮತ್ತು ಒಗ್ಗಟ್ಟು ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
2012 ರಲ್ಲಿ ಉಡುಪಿ ಧರ್ಮಪ್ರಾಂತ್ಯ ಅಸ್ವಿತ್ವಕ್ಕೆ ಬಂದ ಬಳಿಕ 21 ಎಪ್ರಿಲ್ 2013 ರಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಸ್ವಿತ್ವಕ್ಕೆ ಬಂದಿದ್ದು, ಘಟಕ, ವಲಯ ಮತ್ತು ಕೇಂದ್ರ ಎಂಬ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 51 ಚರ್ಚ್ ಘಟಕ, 5 ವಲಯ ಹಾಗೂ ಒಂದು ಕೇಂದ್ರಿಯ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಕೆಥೊಲಿಕ್ ಸಭಾ ಕಳೆದ 6 ವರ್ಷಗಳಲ್ಲಿ ಎರಡು ಬಾರಿ ಆಲ್ ಇಂಡಿಯಾ ಕೆಥೊಲಿಕ್ ಯೂನಿಯನ್ ಇದರ ರಾಷ್ಟ್ರೀಯ ಪ್ರಶಸ್ತಿ ಪಡೆದಿರುತ್ತದೆ.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಳೆದ 7 ವರ್ಷಗಳಲ್ಲಿ ಉಡುಪಿ ಧರ್ಮಪ್ರಾಂತ್ಯದಲ್ಲಿ ತನ್ನದೇ ಆದ ಸೇವೆಯ ಮೂಲಕ ಅಶಕ್ತರಿಗೆ, ಬಡವರಿಗೆ ತಲುಪುವ ಪ್ರಯತ್ನ ನಡೆಸಿದೆ. ಕೆಥೊಲಿಕ್ ಸಭಾ ತನ್ನ ಸಹ ಸಂಸ್ಥೆಯಾದ ಸಶಕ್ತ ಸಮುದಾಯ ಸೇವಾ ಟ್ರಸ್ಟ್ ಇದರ ಮೂಲಕ ಈ ವರೆಗೆ 98 ವಿದ್ಯಾರ್ಥಿಗಳಿಗೆ ರೂ 5.69 ಲಕ್ಷ ಶೈಕ್ಷಣಿಕ ನೆರವು, 46 ಮಂದಿಗೆ ರೂ. 3.64 ಲಕ್ಷ ಆರೋಗ್ಯ ನೆರವು, 36 ಕುಟುಂಬಗಳಿಗೆ 8.45 ಲಕ್ಷ ಮನೆ ನಿರ್ಮಾಣಕ್ಕಾಗಿ ನೀಡಿದ್ದು ಒಟ್ಟು ರೂ 17.78 ಲಕ್ಷ ಹಣವನ್ನು ವ್ಯಯಿಸಲಾಗಿದೆ. ಇದಲ್ಲದೆ ಜೋನ್ ಡಿಸಿಲ್ವಾ ಫೌಂಡೇಶನ್ ಮುಂಬಯಿ ಇವರ ಸಹಕಾರದಿಂದ ಈ ವರೆಗೆ 714 ವದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ್ದು, ಪ್ರತಿ ವರ್ಷ ಸುಮಾರು 13000 ಕುಟುಂಬಗಳಿಗೆ ಮಣಿಪಾಲ ಕೊಂಕಣಿ ಆರೋಗ್ಯ ಸುರಕ್ಷಾ ಕಾರ್ಡ್ ನೀಡಿದ್ದು, ಸುಮಾರು 3 ಕೋಟಿ ಲಾಭ ಕ್ರೈಸ್ತ ಸಮುದಾಯ ಪಡೆದುಕೊಂಡಿದೆ. ಇಷ್ಟೇ ಅಲ್ಲದೆ ಸುಮಾರು 123 ಕುಟುಂಬಗಳಿಗೆ ರೂ 1.82 ಲಕ್ಷ ಮೌಲ್ಯದ ಮಣಿಪಾಲ ಕೊಂಕಣಿ ಆರೋಗ್ಯ ಸುರಕ್ಷಾ ಕಾರ್ಡ್ಗಳನ್ನು ಉಚಿತವಾಗಿ ಸಂಘಟನೆಯ ವತಿಯಿಂದ ನೀಡಲಾಗಿದೆ.
ಪ್ರಗತಿಯ ಮೆಟ್ಟಿಲನ್ನು ಹತ್ತುತ್ತಿರುವ ನಮ್ಮ ಕೆಥೊಲಿಕ್ ಸಮುದಾಯವನ್ನು ಮತ್ತಷ್ಟು ಸಶಕ್ತರನ್ನಾಗಿಸಬೇಕು, ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸದೃಢಗೊಳಿಸಬೇಕು ಎಂಬ ಉದ್ದೇಶದೊಂದಿಗೆ ಏಕತೆ ಮತ್ತು ಸಮುದಾಯದ ಭವಿಷ್ಯದ ಕುರಿತು ಚಿಂತನ ಮತ್ತು ಮಂಥನ ಮಾಡುವ ನಿಟ್ಟಿನಲ್ಲಿ ಸಮುದಾಯೋತ್ಸವ – 2020 ಸಹಮಿಲವನ್ನು ಆಯೋಜಿಸಿಲಾಗಿದೆ.
ಸಮಾವೇಶದಲ್ಲಿ ವಿವಿಧ ಧಾರ್ಮಿಕ ಮತ್ತು ಶ್ರೀಸಾಮಾನ್ಯ ನಾಯಕರು ಸಮಾವೇಶದ ಪ್ರಮುಖ ಉದ್ಧೇಶದ ಮೇಲೆ ತಮ್ಮ ಅಭಿಪ್ರಾಯ ಮಂಡನೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಉತ್ತರಾಖಂಡದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಉಡುಪಿ ಧರ್ಮಾಧ್ಯಕ್ಷ ರೆ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಬೆಂಗಳೂರು ಮಹಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ|ವಂ|ಡಾ|ಪೀಟರ್ ಮಚಾದೊ, ಮಂಗಳೂರಿನ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಪೀಟರ್ ಪಾವ್ಲ್ ಸಲ್ಡಾನಾ, ಮಾಜಿ ಶಾಸಕ ಜೆ ಆರ್ ಲೋಬೊ, ನಿವೃತ ಕೆ ಎ ಎಸ್ ಅಧಿಕಾರಿ ಅ್ಯಂಟನಿ ಮೆಂಡೊನ್ಸಾ, ಹಿರಿಯ ಪತ್ರಕರ್ತ ಗೇಬ್ರಿಯಲ್ ವಾಜ್, ಮಹಾರಾಷ್ಟ್ರದ ಹಿರಿಯ ರಾಜಕೀಯ ನಾಯಕಿ ಜಾನೆಟ್ ಡಿಸೋಜ ಸೇರಿದಂತೆ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಕೆಥೊಲಿಕ್ ಸಮುದಾಯದಲ್ಲಿ ಕೃಷಿ (ಭತ್ತ ಕೃಷಿ), ಆರೋಗ್ಯ (ಮನೆ ಮದ್ದು/ನಾಟಿ ವೈದ್ಯ), ರಾಜಕೀಯ, ಸಮಾಜಸೇವೆ ಮತ್ತು ಸಮೂಹ ಮಾಧ್ಯಮದಲ್ಲಿ ಹೀಗೆ ಐದು ವಿಭಾಗಲ್ಲಿ ಸಾಧನೆ ತೋರಿದವರಿಗೆ ಹಾಗೂ ಉಡುಪಿ ಮೂಲದವರಾಗಿದ್ದು, ಕಳೆದ 2 ವರ್ಷಗಳಿಂದ ಹೊರ ದೇಶ, ರಾಜ್ಯಗಳಲ್ಲಿ ಸಾಧನೆ ಮಾಡಿದವರಿಗೆ, ಸಹಕಾರಿ ಸಂಘ ಹಾಗೂ ಎ.ಪಿ.ಎಮ್.ಸಿ ಗಳಲ್ಲಿ ನಿರ್ದೇಶಕರಾಗಿದ್ದವರಿಗೆ, ಗಜೆಟೆಡ್ ಮತ್ತು ಅದಕ್ಕಿಂತ ಉನ್ನತ ಹಂತದ ಅಧಿಕಾರಿಗಳಿಗೆ ಹಾಗೂ ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುವ ಕ್ರೈಸ್ತ ನಾಯಕರಿಗೆ ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ಅಧ್ಯಾತ್ಮಿಕ ನಿರ್ದೇಶಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸಮುದಾಯೋತ್ಸವ -2020 ಸಂಚಾಲಕ ಎಲ್ ರೋಯ್ ಕಿರಣ್ ಕ್ರಾಸ್ಟೊ, ಕಾರ್ಯದರ್ಶಿ ಮೇರಿ ಡಿಸೋಜಾ ಉಪಸ್ಥಿತರಿದ್ದರು.