ಜ.26: ಅಂಗಾಂಗ ದಾನಿ ದಿ| ಆಶಾ ಗ್ಲೋರಿಯಾ ರೋಡ್ರಿಗಸ್ ಕುಟುಂಬಸ್ಥರಿಗೆ ಗೌರವ ಸಮರ್ಪಣೆ
ಮಂಗಳೂರು: ಅಂಗಾಗ ದಾನ ಮಾಡಿದ ಮೃತರ ಕುಟುಂಬಸ್ಥರಿಗೆ ಜ.26 ರಂದು ಜಿಲ್ಲಾಡಳಿತದ ವತಿಯಿಂದ ಗೌರವ ನಡೆಯಲಿದೆ. ನಗರದ ಗ್ರೆಶನ್ ಅಲೆಕ್ಸ್ ರೋಡ್ರಿಗಸ್ ಹಾಗೂ ಗ್ರೆಟ್ಟ ಪ್ಲಾವೀಯ ರೋಡ್ರಿಗಸ್ ಇವರ ಏಕೈಕ ಪುತ್ರಿಯಾಗಿರುವ ದಿ| ಆಶಾ ಗ್ಲೋರಿಯಾ ರೋಡ್ರಿಗಸ್ 23 ವರ್ಷ, ಇವರು ಪದವಿ ಹಾಗೂ ಸ್ನಾತಕೋತ್ತರ ಪದವಿ ವಾಣಿಜ್ಯ ವಿಭಾಗದಲ್ಲಿ ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ನಂತರ ಅದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಆಕಸ್ಮಿಕವಾಗಿ ಆರೋಗ್ಯ ಸಮಸ್ಯೆಗೆ ಒಳಗಾಗಿ ಮೆದುಳು ನಿಷ್ಠ್ರೀಯಗೊಂಡಿದ್ದು, ಕುಟುಂಬದ ಸದಸ್ಯರು ಕೂಡಲೇ ಮೆದುಳು ನಿಷ್ಠ್ರೀಯಗೊಂಡ ಅವರ ದೇಹದ ಕಣ್ಣು, ಚರ್ಮ, ಯಕೃತ್ (ಲಿವರ್), ಹೃದಯ, ಶ್ವಾಸಕೋಶ, ಮೂತ್ರಪಿಂಡಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇಲ್ಲಿ ಅಂಗಾಂಗದಾನವನ್ನು ಮಾಡುವ ಮೂಲಕ, ದಿ| ಆಶಾ ಗ್ಲೋರಿಯಾ ರೋಡ್ರಿಗಸ್, ಸಾವಿನಲ್ಲೂ ಜೀವಸಾರ್ಥಕತೆಯನ್ನು ಹೊಂದುವಂತೆ ಮಾಡಿರುತ್ತಾರೆ.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಜ.26ರಂದು ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನಗರದ ನೆಹರು ಮೈದಾನದಲ್ಲಿ ಜರುಗುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ದಾನಿಯ ಕುಟುಂಬಸ್ಥರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸನ್ಮಾನಿಸಿ ಗೌರವಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.