ಜ. 29 ರಂದು ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್
ಉಡುಪಿ: ಕರಾವಳಿಯ ಮಾಧ್ಯಮ ಲೋಕಕ್ಕೆ ನೂತನವಾಇಗ ಕಾಲಿಡುತ್ತಿರುವ ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್ ಕಾರ್ಯಕ್ರಮ ಜನವರಿ 29 ರಂದು ಭಾನುವಾರ ಮಲ್ಪೆ ಕಡಲಕಿನಾರೆಯಲ್ಲಿ ನಡೆಯಲಿದೆ ಎಂದು ಮುಕ್ತ ವಾಹಿನಿಯ ಸುದ್ದಿ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಶೆಟ್ಟಿ ಹೇಳಿದರು.
ಅವರು ಗುರುವಾರ ವಾಹಿನಿಯ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಉದ್ಯಮಿಗಳು, ಸಂತರು ಸೇರಿದಂತೆ ಎಪ್ಪತ್ತಕ್ಕೂ ಅಧಿಕ ಅತಿಥಿಗಳು ಭಾಗವಹಿಲಿದ್ದಾರೆ. ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಉದ್ಘಾಟನೆಯ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹದಿನಾಲ್ಕು ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು.
ಸದ್ಯ ಮುಕ್ತ ಟಿವಿ ಪ್ರಾಯೋಗಿಕವಾಗಿ ಪ್ರಸಾರಗೊಳ್ಳುತ್ತಿದ್ದು, ಕಾರವಾರದಿಂದ ಕಾಸಗೋಡು ತನಕದ ಕರಾವಳಿ ಪ್ರದೇಶದಲ್ಲಿ ಪ್ರಸಾರಗೊಳ್ಳುತ್ತಿದೆ. ಸುದ್ದಿ ಮತ್ತು ಮನೋರಂಜನೆಗಾಗಿ ಸಮಾನ ಅವಕಾಶವನ್ನು ನೀಡುತ್ತಾ ಬಂದಿರುವ ಈ ವಾಹಿನಿಯ ಹಲವಾರು ನೂತನ ಕಾರ್ಯಕ್ರಮಗಳು ಉದ್ಘಾಟನೆಯ ಬಳಿಕ ಅಧಿಕೃತವಾಗಿ ಆರಂಭಗೊಳ್ಳಲಿದೆ.
ಮುಕ್ತ ಟಿವಿ ಲೋಕಾರ್ಪಣೆಗೊಳ್ಳುತ್ತಿರುವ ಸಮಾರಂಭವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಮುಕ್ತ ತುಳು ಫಿಲ್ಮ್ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಫಿಲ್ಮ್ ಅವಾರ್ಡ್ ಕಾರ್ಯಕ್ರಮದಲ್ಲಿ 2016ರಲ್ಲಿ ಬಿಡುಗಡೆಯಾದ ಎಲ್ಲಾ ತುಳುಚಿತ್ರಗಳು ಭಾಗವಹಿಸುತ್ತಿವೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ಸಂಯೋಜನೆ, ಹಿನ್ನಲೆ, ಸಂಗೀತ, ಸಾಹಸ ಸಂಯೋಜನೆ, ನೃತ್ಯ, ಸಂಕಲನ, ಛಾಯಾಗ್ರಹಣ, ಜನಮೆಚ್ಚಿದ ಹಾಸ್ಯ ನಟ, ಜನಮೆಚ್ಚಿದ ನಟ, ನಟಿ ತೀರ್ಪುಗಾರರ ಆಯ್ಕೆ, ಉತ್ತಮ ನಾಯಕ ನಟ, ನಾಯಕಿ ನಿರ್ದೇಶನ, ಮುಕ್ತ ತುಳು ಫಿಲ್ಮ್ ಅವಾರ್ಡ್ ಮೊದಲಾದ ಪ್ರಶಸ್ತಿಗಳು ನೀಡಲಾಗುವುದು.
ತುಳುರಂಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ತುಳು ಚಿತ್ರರಂಗಕ್ಕಾಗಿ ದುಡಿದ ಭೋಜ ಸುವರ್ಣ, ಡಾ ಸಂಜೀವ ಡಂಡಕೇರಿ, ವಿ ಜಿ ಪಾಲ್ ಮತ್ತು ಟಿ ಎ ಶ್ರೀನಿವಾಸ್ ಅವರನ್ನು ಈ ವೇಳೆ ಗುರುತಿಸಿ ಗೌರವಿಸಲಾಗುವುದು. ಚಿತ್ರರಂಗದಲ್ಲಿ ದುಡಿದು ಅಗಲಿದ ಸುಂದರನಾಥ್ ಸುವರ್ಣ ಮತ್ತು ಕೆ ಎನ್ ಟೇಲರ್ ಅವರಿಗೆ ಮರಣೋತ್ತರವಾಗಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹದಿನೇಳು ಜನ ತಾರೆಯರು ಸೇರಿದಂತೆ ಇತರ ಗಣ್ಯ ವ್ಯಕ್ತಿಳು ತಾರಾ ಮೆರುಗು ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪ್ರಮುಖರಾದ ವಿವೇಕ್ ಜಿ ಸುವರ್ಣ, ಆಡಳಿತ ವ್ಯವಸ್ಥಾಪಕ ಅಶ್ವಥ್ ಕಾಂಚನ್, ಕಾರ್ಯಕ್ರಮದ ವಿಭಾದ ಮುಖ್ಯಸ್ಥ ಸರಸ್ವತಿ ಸಾಲ್ಯಾನ್, ಅರ್ಪಿತಾ ಉಪಸ್ಥಿತರಿದ್ದರು.