ಜ.30ರಂದು ಹಿರಿಯಡ್ಕದಲ್ಲಿ ‘ಗಾಂಧಿ ಭಾರತ’ ಬೃಹತ್ ಸಮಾವೇಶ

Spread the love

ಜ.30ರಂದು ಹಿರಿಯಡ್ಕದಲ್ಲಿ ‘ಗಾಂಧಿ ಭಾರತ’ ಬೃಹತ್ ಸಮಾವೇಶ

ಉಡುಪಿ: ಮಹಾತ್ಮಗಾಂಧಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬಿದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ವತಿಯಿಂದ ‘ಗಾಂಧಿ ಭಾರತ ಬೃಹತ್ ಸಮಾವೇಶ’ವೊಂದು ಜ.30ರ ಗುರುವಾರ ಅಪರಾಹ್ನ 3 ಗಂಟೆಗೆ ಹಿರಿಯ್ಕದ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜೈ ಬಾಪು ಜೈಭೀಮ್ ಜೈ ಸಂವಿಧಾನ’ದ ಅಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯಡಕ ದೇವಾಡಿಗರ ಭವನದಿಂದ ಸಭಾ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಮಹಾತ್ಮ ಗಾಂಧಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳೊಂದಿಗೆ ಮೆರವಣಿಯೂ ನಡೆಯಲಿದೆ ಎಂದವರು ತಿಳಿಸಿದರು.

ಕಾರ್ಯಕ್ರಮವನ್ನು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸ ಲಿದ್ದಾರೆ. ಹಿರಿಯಡಕದ ಹಿರಿಯ ಕಾಂಗ್ರೆಸ್ಸಿಗ ಜಯಂತ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ತೀರ್ಥಹಳ್ಳಿಯ ಕಿಮ್ಮನೆ ರತ್ನಾಕರ್, ಮಾಜಿ ಸಚಿವೆ ಉಮಾಶ್ರೀ, ಜಯಪ್ರಕಾಶ್ ಹೆಗ್ಡೆ ಭಾಗವಹಿಸಲಿದ್ದಾರೆ ಎಂದರು.

ಪ್ರಮುಖ ಭಾಷಣಕಾರರಾಗಿ ನಿಖಿತ್ರಾಜ್ ಮೌರ್ಯ, ಸುಧೀರ್ ಮುರೋಳಿ ಭಾಗವಹಿಸಲಿದ್ದಾರೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬಿದ ಪ್ರಯುಕ್ತ ಕಳೆದ 21ಕ್ಕೆ ಬೃಹತ್ ಸಭೆ ಬೆಳಗಾವಿಯಲ್ಲಿ ನಡೆದಿದ್ದು, ಮುಂದಿನ ಒಂದು ವರ್ಷ ಕಾಲ ಸರಕಾರ ಹಾಗೂ ಪಕ್ಷದ ವತಿಯಿಂದ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಂಧಿ ಭಾರತ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಗಾಂಧೀಜಿ, ಸಂವಿಧಾನ ಹಾಗೂ ಡಾ.ಅಂಬೇಡ್ಕರ್ ಕುರಿತಂತೆ ದೇಶಾದ್ಯಂತ ವ್ಯಾಪಕ ಚರ್ಚೆಗಳು ನಡೆದಿದ್ದು, ಅವುಗಳನ್ನು ಅಲ್ಲಗೆಳೆಯುವ ಪ್ರಯತ್ನ, ಹುನ್ನಾರಗಳು ನಡೆಯುತಿವೆ. ಸಂವಿಧಾನ ಪ್ರತಿಪಾದಿಸಿದ ಮೌಲ್ಯಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಸೊರಕೆ ನುಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಮಾತನಾಡಿ, ಹಿರಿಯಡಕದಲ್ಲಿ ನಡೆಯುವ ಗಾಂಧಿ ಭಾರತ ಸಮಾವೇಶದಲ್ಲಿ 5,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಗಾಂಧೀಜಿಯವರ ತತ್ವ, ಪ್ರತಿಪಾದಿಸಿದ ಸಿದ್ಧಾಂತಗಳನನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತಂತೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಇದರ ವಿರುದ್ಧ ಜನರಲ್ಲಿ ವಿಶೇಷವಾಗಿ ಯುವ ಜನತೆಯಲ್ಲಿ ಅರಿವು ಮೂಡಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, 20214ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಳಿಕ ಗಾಂಧೀಜಿ ಅವರನ್ನು ಕೇವಲ ಸ್ವಚ್ಛತೆಗೆ ಸೀಮಿತಗೊಳಿಸುವ ಹುನ್ನಾರವೊಂದು ನಡೆದಿದೆ. ಈ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಗಳಲ್ಲಿ ಗಾಂಧೀಜಿಯವರ ಪಾತ್ರ, ಕೊಡುಗೆ ಗಳನ್ನು ಅಲ್ಲಗೆಳೆಯುವ ಹುನ್ನಾರವೊಂದು ನಡೆಯುತ್ತಿದೆ. ಈ ಬಗ್ಗೆ ಜನತೆಯನ್ನು ಜಾಗೃತಿ ಮೂಡಿಸುವ ಕೆಲಸವೊಂದು ನಡೆಯಬೇಕಾಗಿದ್ದು, ಗಾಂಧಿ ಭಾರತ ಸಮಾವೇಶದ ಮೂಲಕ ಇವುಗಳಿಗೆ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗಾಂಧಿ ಭಾರತ ಸಮಾವೇಶದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ ಕುಲಾಲ್, ನವೀನ್ಚಂದ್ರ ಸುವರ್ಣ, ನಾಯಕರಾದ ನಿತೀನ್ ಸಾಲ್ಯಾನ್, ಸುನಿಲ್ ಬಂಗೇರ, ನಿತಿನ್ ಶೆಟ್ಟಿ, ಸುಹೇಲ್ ರಹಮತುಲ್ಲಾ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments