ಜ. 30: ಸಹಬಾಳ್ವೆ ವತಿಯಿಂದ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರುದ್ದ ಪ್ರತಿಭಟನೆ
ಉಡುಪಿ: ಕೇಂದ್ರ ಸರ್ಕಾರದ ಕರಾಳ ಕಾನೂನುಗಳಾದ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರೋಧಿಸಿ ಉಡುಪಿಯಲ್ಲಿ ಸಹಬಾಳ್ವೆ ಸಂಘಟನೆ ವತಿಯಿಂದ ಜನವರಿ 30ರಂದು ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಂಘಟನೆಯ ಪದಾಧಿಕಾರಿ ಪ್ರಶಾಂತ್ ಜತ್ತನ್ನ ಹೇಳಿದರು.
ಅವರು ಬುಧವಾರ ಆದಿ ಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪಾದಯಾತ್ರೆಯು ಮಧ್ಯಾಹ್ನ 2.30ಕ್ಕೆ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಹೊರಟು ಬನ್ನಂಜೆ, ಸಿಟಿ ಬಸ್ ಸ್ಟ್ಯಾಂಡ್, ಕ್ಲಾಕ್ ಟವರ್, ಮಿಶನ್ ಹಾಸ್ಪಿಟಲ್ ಮಾರ್ಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನಕ್ಕೆ ತಲುಪಲಿದೆ ಎಂದರು.
ಇನ್ನೋರ್ವ ಪದಾಧಿಕಾರಿ ಸುಂದರ ಮಾಸ್ತರ್ ಮಾತನಾಡಿ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ 4 ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದ್ದು ಪ್ರತಿಭಟನಾ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿಭೀಮ್ ಆರ್ಮಿ ಮುಖ್ಯಸ್ಥರಾದ ಚಂದ್ರಶೇಖರ್ ಆಝಾದ್ ರಾವಣ್, ನಿವೃತ್ತ ಐ ಎ ಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಚಿಂತಕರಾದ ಮಹೇಂದ್ರ ಕುಮಾರ್, ಯುವನಾಯಕಿ ನಜ್ಮಾ ನಝೀರ್ ಚಿಕ್ಕನೇರಳೆ, ವಿದ್ಯಾರ್ಥಿ ನಾಯಕರಾದ ಅಮೂಲ್ಯ, ಸಾಮಾಜಿಕ ಹೋರಾಟಗಾರರಾದ ಮೆಹರೋಝ್ ಖಾನ್’ಹಾಗೂ ಕವಿತಾ ರೆಡ್ಡಿ ಭಾಗವಹಿಸಲಿದ್ದಾರೆ ಎಂದರು.
ಜಾತ್ಯತೀತ ನಿಲುವಿನ ರಾಜಕೀಯ ಪಕ್ಷಗಳು, ಪ್ರಗತಿಪರ, ಮಹಿಳಾ, ವಿದ್ಯಾರ್ಥಿ, ಯುವ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ವಿವಿಧ ಧಾರ್ಮಿಕ ಸಂಘಟನೆಗಳು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಹಬಾಳ್ವೆ ಉಡುಪಿ ಇದರ ಅಧ್ಯಕ್ಷರಾದ ಅಮೃತ್ ಶೆಣೈ, ಫಾದರ್ ವಿಲಿಯಂ ಮಾರ್ಟಿಸ್, ಅಬ್ದುಲ್ ಅಜೀಜ್ ಉದ್ಯಾವರ್, ಶಶಿದರ್ ಹೆಮ್ಮಾಡಿ, ಕಲೀಲ್ ಅಹ್ಮದ್, ಸಿರಿಲ್ ಮಥಾಯಸ್, ಚಂದ್ರಿಕಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.