ಜ. 8 ರಂದು ಕಾಪು ಕ್ಷೇತ್ರದಲ್ಲಿ ರೂ. 445 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ. ವಿನಯ್ ಕುಮಾರ್ ಸೊರಕೆ
ಉಡುಪಿ: ಕಾಪು ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಿರುವ ರು. 445 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 8 ರಂದು ನೆರವೇರಿಸಲಿರುವರು ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಶುಕ್ರವಾರ ಕಾಪು ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಂದು ಸಂಜೆ 4 ಗಂಟೆಗೆ ಕಾಪುವಿಗೆ ಆಗಮಿಸುವ ಮುಖ್ಯಮಂತ್ರಿಗಳು ಬಂಗ್ಲೆ ಮೈದಾನ ಬಳಿ ರು. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾಪು ಪುರಸಭೆಯ ನೂತನ ಕಟ್ಟಡವನ್ನು ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.
ಕಾಪು ಪುರಸಭೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮಣಿಪುರದಿಂದ ನೀರು ಪೂರೈಸುವ ರು.61 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ, ರು. 400 ಕೋಟಿ ವೆಚ್ಚದಲ್ಲಿ ಬೆಳಪುವಿನಲ್ಲಿ ನಿರ್ಮಾಣವಾಗುವ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿಗೆ ಚಾಲನೆ, 10 ಕೋಟಿ ವೆಚ್ಚದ ಕೈಗಾರಿಕಾ ವಲಯ, ಸರಕಾರಿ ಪಾಲಿಟೆಕ್ನಿಕ್, ಎಲ್ಲೂರಿನಲ್ಲಿ ನಿರ್ಮಾಣವಾಗಲಿರುವ ಕಾಪು ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಪುರಸಭಾ ವ್ಯಾಪ್ತಿಯ ಕೊಳಚೆ ನೀರಿನ ಶುಧ್ಧೀಕರಣ ಘಟಕ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು.
ಸುಮಾರು 10 ಸಾವಿರ ಜ£ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಗುವುದು. ಅಲ್ಲದೆ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ವತಿಯಿಂದ ಮಾಡಲಾಗಿದ್ದು, ಸಹಕಾರಿ, ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳಿಂದ 10 ಸಾವಿರ ಜನ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಶಾಸಕನಾಗಿ ಕಳೆದ ನಾಲ್ಕೂವರೆ ವರ್ಷದಲ್ಲಿ ಕಾಪು ಕ್ಷೇತ್ರಕ್ಕೆ ಸುಮಾರು 1,700 ಕೋಟಿ ಅನುದಾನವನ್ನು ತರಲಾಗಿದೆ. ಮುಖ್ಯಮಂತ್ರಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಾಪು ತಾಲೂಕು ಘೋಷಣೆಯ ನೋಟಿಫಿಕೇಶನ್ ಜನವರಿ 7 ರಂದು ಅಂತಿಮವಾಗಲಿದೆ. ಬಳಿಕ ಅಹವಾಲು ಸ್ವೀಕಾರ ನಡೆಯಲಿದೆ. ಕಾಪು ಕ್ಷೇತ್ರದ 30 ಗ್ರಾಮಗಳನ್ನು ಸೇರಿಸಿಕೊಂಡು ತಾಲೂಕು ರಚನೆಯಾಗಲಿದೆ. ತಾಲೂಕು ರಚನೆ ಜೊತೆಗೆ ಜನರ ಅನುಕೂಲಕ್ಕಾಗಿ ಶಿರ್ವ, ಪಡುಬಿದ್ರಿ, ಹಿರಿಯಡ್ಕ ಹಾಗೂ ಕಾಪುವಿನಲ್ಲಿ ನಾಡ ಕಚೇರಿ ಬರಲಿದೆ. ಹೆಜಮಾಡಿ ಬಂದರು, ಮಿನಿ ವಿಧಾನಸೌಧ ಹಾಗೂ ನದಿಗಳ ಹೂಳೆತ್ತುವ ಯೋಜನೆಗಳಿಗೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿ ಸದಸ್ಯ ದಿನೇಶ್ ಪುತ್ರನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಜಿಪಂ ಮಾಜಿ ಅಧ್ಯಕ್ಷೆ ಸರಸು ಬಂಗೇರ, ಕಾಪು ಬ್ಲಾಕ್ ದಕ್ಷಿಣ ಅಧ್ಯಕ್ಷ ನವೀನ್ಚಂದ್ರ ಜೆ ಶೆಟ್ಟಿ, ಉತ್ತರ ಅಧ್ಯಕ್ಷ ಸುಧೀರ್ ಹೆಗ್ಡೆ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪುರಸಭಾ ಅಧ್ಯಕ್ಷೆ ಸೌಮ್ಯಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು, ವಿನಯ ಬಲ್ಲಾಳ್ ಇದ್ದರು.