ಜ20 ರಂದು ಕೇಂದ್ರ ಸಚಿವ ಸುರೇಶ್ ಪ್ರಭು ಮಂಗಳೂರಿಗೆ- ಡಿ ವೇದವ್ಯಾಸ ಕಾಮತ್
ಮಂಗಳೂರು: ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಜನವರಿ 20 ರಂದು ರಾತ್ರಿ 8 ಕ್ಕೆ ನಗರದ ಓಶಿಯನ್ ಪರ್ಲ್ ಹೋಟೇಲಿನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಅವರು ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಕುರಿತು ಪತ್ರಿಕಾ ಹೇಳಕೆ ನೀಡಿರುವ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್, ಸಂವಾದದಲ್ಲಿ ಜಿಲ್ಲೆಯ ಸುಮಾರು 30 ಸಂಘಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಒಟ್ಟು 200 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಸಚಿವರು ಸಂವಾದ ನಡೆಸುತ್ತಾರೆ ಎಂದರು.
ಕೆಸಿಸಿಐ, ಸಣ್ಣ ಕೈಗಾರಿಕಾ ಸಂಘ ಯೆಯ್ಯಾಡಿ ಮತ್ತು ಬೈಕಂಪಾಡಿ ಘಟಕ, ಚಾರ್ಟೆಡ್ ಅಸೋಸಿಯೇಶನ್, ಕರ್ನಾಟಕ ಕ್ಯಾಶ್ಯೂ ಮ್ಯಾನುಫೆಕ್ಚರ್ಸ್ ಅಸೋಸಿಯೇಶನ್, ದ.ಕ ಆಟೋ ಮೊಬೈಲ್ ಅಸೋಸಿಯೇಶನ್, ಕೆನರಾ ಸಣ್ಣ ಕೈಗಾರಿಕಾ ಇಂಡಸ್ಟ್ರಿಸ್, ವಕೀಲರ ಸಂಘ, ಎಂಜಿನಿಯರ್ ಸಂಘ, ಕೆಲವು ಪ್ರಮುಖ ವೈದ್ಯರು, ಲಯನ್ಸ್- ರೋಟರಿ ಸಂಘಟನೆಯ ಪ್ರಮುಖರು, ಮಂಗಳೂರು ಮರ್ಚೆಂಟ್ ಅಸೋಸಿಯೇಶನ್, ಹೋಟೇಲ್ಸ್- ರೆಸ್ಟೋರೆಂಟ್ ಎಸೋಸಿಯೇಶನ್ಸ್, ವೈನ್ ಮರ್ಚೆಂಟ್ಸ್, ಟಿಂಬರ್ಸ್ ಅಸೋಸಿಯೇಶನ್, ಕೆಮಿಸ್ಟ್ ಡ್ರಗ್ಸ್ ಎಸೋಸಿಯೇಶನ್, ಬ್ಯಾಂಕರ್ಸ್ ಎಸೋಸಿಯೇಶನ್ಸ್, ಹಳೆ ಬಂದರು ವ್ಯಾಪಾರಿಗಳ ಸಂಘ, ಬಂದರು ಕಿರಾಣಿ ವ್ಯಾಪಾರಿಗಳ ಸಂಘದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಮಂಗಳೂರು ವಾಣಿಜ್ಯ ಹಾಗೂ ಕೈಗಾರಿಕಾ ಉದ್ಯಮಗಳ ಮೇಲಿರುವ ಸವಾಲುಗಳು, ಅವುಗಳ ಪರಿಹಾರಕ್ಕೆ ಸರಕಾರ ಏನು ಮಾಡಬೇಕು ಎಂಬ ವಿಚಾರಗಳ ಕುರಿತು ಉದ್ಯಮಿಗಳು ಸಚಿವರ ಗಮನ ಸೆಳೆಯಲಿದ್ದಾರೆ. ಈ ಕುರಿತು ಸಚಿವರು ಮಾಹಿತಿ ಸಂಗ್ರಹಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸುವತ್ತ ಕಾರ್ಯಕ್ರಮ ರೂಪಿಸಲಿದ್ದಾರೆ.