ಟಿ.ಜೆ. ಅಬ್ರಹಾಂಗೆ ಉಡುಪಿ ನ್ಯಾಯಾಲಯದಿಂದ ಸಮನ್ಸ್
ಉಡುಪಿ: ಉಡುಪಿ ಶಾಸಕ ಹಾಗೂ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ನ್ಯಾಯಾಲಯದಲ್ಲಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಟಿ. ಜೆ. ಅಬ್ರಹಾಂ ವಿರುದ್ಧ ಖಾಸಗಿ ಕ್ರಿಮಿನಲ್ ದಾವೆ ಸಲ್ಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ಸಚಿವ ಪ್ರಮೋದ್ ಮಧ್ವರಾಜ್ ಸಿಂಡಿಕೇಟ್ ಬ್ಯಾಂಕಿನಿಂದ 1.1 ಕೋಟಿ ರೂ. ಮೌಲ್ಯದ ಜಮೀನಿಗೆ 193 ಕೋಟಿ ರೂ. ಸಾಲ ಪಡೆದು ಅಕ್ರಮ ಎಸಗಿದ್ದಾರೆ, ಬ್ಯಾಂಕಿನವರೊಂದಿಗೆ ಶಾಮೀಲಾಗಿ ವಂಚನೆ ನಡೆಸಿದ್ದಾಗಿ ಟಿ.ಜೆ. ಅಬ್ರಹಾಂ ಸಾರ್ವಜನಿಕವಾಗಿ ಆರೋಪಿಸಿದ್ದರು.
ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಭಾರತೀಯ ರಿಸರ್ವ್ ಬ್ಯಾಂಕಿನ ಮುಖ್ಯಸ್ಥರಿಗೆ ದೂರು ನೀಡಿದ್ದಾಗಿ ಹೇಳಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಸಾರ್ವಜನಿಕ ವಲಯದಲ್ಲಿ ತೇಜೋವಧೆ ಮತ್ತು ಮಾನನಷ್ಟವಾದ ಹಿನ್ನೆಲೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ಜಡ್ಜ್ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದಾವೆ ಸಲ್ಲಿಸಿದ್ದರು.
ನ್ಯಾಯಾಧೀಶ ಮಂಜುನಾಥ ಎಂ.ಎಸ್. ಅವರು ಆರೋಪಿ ಟಿ.ಜೆ. ಅಬ್ರಹಾಂ ಅವರಿಗೆ 2018, ಜು. 5ರಂದು ನ್ಯಾಯಾಲಯದಲ್ಲಿ ಹಾಜರಾಗುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಪ್ರಮಾಣೀಕೃತ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದು, ಉಡುಪಿಯ ಉದ್ಯಮಿ ಉಲ್ಲಾಸ್ ಭಟ್ ಪೂರಕ ಸಾಕ್ಷಿ ನೀಡಿದ್ದಾರೆ.
ಸಚಿವ ಪ್ರಮೋದ್ ಮಧ್ವರಾಜ್ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ್ ಶೆಟ್ಟಿ ವಾದಿಸುತ್ತಿದ್ದಾರೆ.