ಟೋಲ್ ಕೇಂದ್ರದಲ್ಲಿ ಟೋಲ್ ಕೇಂದ್ರದಲ್ಲಿ ನಮಗೆ ರಕ್ಷಣೆ ನೀಡಿ: ಪೊಲೀಸರಿಗೆ ಮನವಿ ನೀಡಿದ ಹೋರಾಟಗಾರರು!
ಕುಂದಾಪುರ: ಕೆ-20 ನೋಂದಾವಣಿಯ ವಾಹನಗಳಿಗೆ, ವಾಹನ ಚಾಲಕರಿಗೆ ಸಾಸ್ತಾನ ಟೋಲ್ ಕೇಂದ್ರದಲ್ಲಿ ರಕ್ಷಣೆ ಕೋರಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಕಾಲ್ನಡಿಗೆ ಮೂಲಕ ಕೋಟ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿತು.
ಭಾನುವಾರ ಬೆಳಿಗ್ಗೆ ಸಾಸ್ತಾನ ಶಿವಕೃಪಾ ಕಲ್ಯಾಣಮಂಟಪದಿಂದ ಕೋಟ ಪೊಲೀಸ್ ಠಾಣೆ ತನಕ ಸುಮಾರು 7ಕಿಮೀ ಗೂ ಅಧಿಕ ದೂರ ಕಾಲ್ನಡಿಗೆ ಜಾಥಾ ಮೂಲಕ ಸಾಗಿ ಬಂದ ಪ್ರತಿಭಟನಕಾರರು ನವಯುಗ ಕಂಪೆನಿ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನವಯುಗ ಕಂಪೆನಿಯವರಿಂದ ತಮಗೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ಮಂಡಿಯೂರಿ ಮನವಿ ಮಾಡಿಕೊಂಡ ಪ್ರತಿಭಟನಾಕಾರರು, ಕೋಟ ವೃತ್ತ ನಿರೀಕ್ಷಕ ಶ್ರೀಕಾಂತ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ವೇಳೆಯಲ್ಲಿ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಕಳೆದ ಮೂರು ವರ್ಷಗಳಿಂದ ಕೆಎ-20 ವಾಹನಗಳಿಗೆ ವಿನಾಯಿತಿ ನೀಡಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದೇವೆ. 26ರಿಂದ ಸ್ಥಳೀಯ ವಾಹನಗಳಿಗೂ ನವಯುಗ ಕಂಪೆನಿ ಟೋಲ್ ಸಂಗ್ರಹ ಮಾಡುವುದಾಗಿ ಪ್ರಕಟಿಸಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿಕೊಂಡ ಬಳಿಕ 28ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೂ ಮುನ್ನ ಟೋಲ್ ಸಂಗ್ರಹ ಮಾಡುವುದಿಲ್ಲವೆಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದ್ದರು. ಆದರೆ ಇದೀಗ 28ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಮುಂದೂಡಲಾಗಿದೆ. ಹೀಗಾಗಿ 26ಕ್ಕೆ ಸ್ಥಳೀಯ ವಾಹನ ಚಾಲಕರಿಂದ ಟೋಲ್ ವಸೂಲಿ ಮಾಡುವ ಹುನ್ನಾರ ನಡೆಯುತ್ತಿದ್ದು, ಮುಂದೇನಾದರೂ ಅನಾಹುತಗಳು ನಡೆಯದಂತೆ ನಮಗೆ ನವಯುಗ ಕಂಪೆನಿಯವರಿಂದ ರಕ್ಷಣೆ ಕೋರಿ ಕೋಟ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಸ್ಥಳೀಯರ ವಿರೋಧದ ನಡುವೆಯೂ ನವಯುಗ ಕಂಪೆನಿ ಟೋಲ್ ಸಂಗ್ರಹಕ್ಕೆ ಮುಂದಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಒಂದು ವೇಳೆ ಸೋಮವಾರವೇ ಟೋಲ್ ಸಂಗ್ರಕ್ಕೆ ಮುಂದಾದರೆ ನಾವೆಲ್ಲರೂ ಪ್ರತಿಭಟಿಸುತ್ತೇವೆ. ಈ ವೇಳೆಯಲ್ಲಿ ನಮಗೆ ನವಯುಗ ಕಂಪೆನಿಯರಿಂದ ಯಾವುದೇ ರೀತಿಯ ದೌರ್ಜನ್ಯವಾಗದಂತೆ ನಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪೊಲೀಸರಲ್ಲಿ ಲಾರಿ ಮಾಲಕ ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಕಾರ್ಯದರ್ಶಿ ವಿಠಲ್ ಪೂಜಾರಿ, ಕಾನೂನು ಸಲಹೆಗಾರ ಶ್ಯಾಮಸುಂದರ್ ನಾಯರಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಶ್ರೀನಿವಾಸ ಪೂಜಾರಿ, ಸಂಜೀವ ದೇವಾಡಿಗ ಮೊದಲಾದವರು ಇದ್ದರು.