ಟೋಲ್ ಮಾತುಕತೆ ಮತ್ತೆ ವಿಫಲ: ಶನಿವಾರ ಬೃಹತ್ ಪ್ರತಿಭಟನೆ ನಿರ್ಧಾರ
ಕೋಟ: ಜಿಲ್ಲಾಧಿಕಾರಿಯವರು ನೀಡಿದ 4 ದಿನದ ಗಡುವು ಮುಕ್ತಾಯವಾದ ಹಿನ್ನಲೆಯಲ್ಲಿ ಇಂದು ಟೋಲ್ ಗೇಟ್ ಸಂಬಂಧಿತ ಅಧಿಕಾರಿಗಳು ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಭೇಟಿಯಾದರು. ಉಡುಪಿ ಜಿಲ್ಲೆಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡುವ ಬದಲು ಬೇರೆ ಪರಿಹಾರವನ್ನು ನೀಡುವ ಕುರಿತು ಮಾತನಾಡಿದ್ದಾರೆ, ಆದರೆ ಹೆದ್ದಾರಿ ಜಾಗೃತಿ ಸಮಿತಿಯವರು ತಮ್ಮ ಹಳೆಯ ಬೇಡಿಕೆ ನ್ಯಾಯ ಸಮ್ಮತವಾಗಿದ್ದು ಅದನ್ನೆ ಈಡೇರಿಸುವಂತೆ ಕೇಳಿದ ಹಿನ್ನಲೆ ಸಂಧಾನ ಯತ್ನ ಮುರಿದಿದೆ. ಸದ್ಯ ಗುರುವಾರ ರಾತ್ರಿ ಟೋಲ್ ವಸೂಲಿ ಪ್ರಾರಂಭವಾಗಲಿದ್ದು, ಹೆದ್ದಾರಿ ಜಾಗೃತಿ ಸಮಿತಿ ಶನಿವಾರ 10 ಗಂಟೆಗೆ ಬೃಹತ್ ಹೋರಾಟ ನಡೆಸಲಿದೆ.
ಗುರುವಾರದಂದು ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರನ್ನು ಭೇಟಿಯಾದ ಟೋಲ್ ಸಂಬಂಧಿತ ಅಧಿಕಾರಿಗಳು ಟೋಲ್‍ನ ಎರಡು ಕಡೆಯ ಸುಮಾರು 5 ಕಿಮೀ ವರೆಗಿನ ವಾಹನಗಳಿಗೆ 150 ರೂಪಾಯಿ ಪಾಸ್ ಪಡೆದು ಸಂಚರಿಸುವಂತೆ ಸಲಹೆ ನೀಡಿದ್ದರು. ಆದರೆ ಈ ಸಲಹೆಯ ಬೇಸರದ ವ್ಯಕ್ತಪಡಿಸಿದ ಜಾಗೃತಿ ಸಮಿತಿಯ ಸದಸ್ಯರು ಸ್ಥಳೀಯ ಕೆಲವು ಪಂಚಾಯಿತಿ ವ್ಯಾಪ್ತಿಗೆ ಟೋಲ್ ವಿನಾಯಿತಿ ನೀಡುವ ಕುರಿತು ಮನವಿ ಮಾಡಿದರೂ ಆದರೆ ಇದಕ್ಕೆ ಅಧಿಕಾರಿಗಳು ಒಪ್ಪದ ಕಾರಣ ಮಾತುಕತೆ ಮುರಿದು ಬಿದ್ದಿದೆ. ಇದೇ ವಿಚಾರವಾಗಿ ಗುರುವಾರದಂದು ಸಂಜೆ ಹೆದ್ದಾರಿ ಜಾಗೃತಿ ಸಮಿತಿಯ ಸಭೆ ನಡೆಸಲಾಯಿತು.
ಸಭೆಯಲ್ಲಿ ಚರ್ಚಿಸಿದ ಸ್ಥಳೀಯರು ಮತ್ತು ಜಾಗೃತಿ ಸಮಿತಿಯ ಸದಸ್ಯರು ಟೋಲ್ ಪ್ರಾರಂಭವಾದ ಬಳಿಕ ಶುಕ್ರವಾರದಂದು ಟೋಲ್ ವ್ಯವಸ್ಥೆಗಳನ್ನು ಪರಿಶೀಲಿಸಿ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಹೆದ್ದಾರಿ ಜಾಗೃತಿ ಸಮಿತಿ ಹಿಂದೆ ಸಲ್ಲಿಸಿದ್ದ ಬೇಡಿಕೆಗಳನ್ನು ಈಡೇರಿಸಿದ ಬಳಿಕವಷ್ಟೆ ಪ್ರತಿಭಟನೆ ಕೈ ಬಿಡುವ ಕುರಿತು ಚರ್ಚಿಸಲಾಯಿತು.