ಟೋಲ್ ಸಂಗ್ರಹದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ ಪಾಲಿಸಿದ್ದೇನೆ : ಜಿಲ್ಲಾಧಿಕಾರಿ ವೆಂಕಟೇಶ್
ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಟೋಲ್ ಸಂಗ್ರಹದ ವಿಚಾರದಲ್ಲಿ ಜಿಲ್ಲಾಡಳಿತದ ಯಾವುದೇ ಪಾತ್ರವಿಲ್ಲ. ಜಿಲ್ಲಾಡಳಿತ ಕೇವಲ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶಗಳನ್ನು ಪಾಲಿಸುವ ಕೆಲಸ ಮಾಡಿದೆ ಎಂದು ಜಿಲ್ಲಾಧಿಕಾರಿ ಟಿ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯವರು ಕಳೆದ ಹಲವು ದಿನಗಳಿಂದ ಜಿಲ್ಲಾಧಿಕಾರಿಗಳ ಕುರಿತು ಮಾಡುತ್ತಿರುವ ಆರೋಪಗಳಿಗೆ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಗಳು, ನವಯುಗ ಕಂಪೆನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸೇರಿ ಯಾವುದೇ ಒಳ ಒಪ್ಪಂದಗಳನ್ನು ಮಾಡಿಲ್ಲ . ಪ್ರತಿಭಟನಾಕಾರರು ತನ್ನ ವಿರುದ್ದ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವಾಗಿವೆ. ಜನವರಿ 28 ರಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ಸಾಸ್ತಾನದ ಪ್ರತಿನಿಧಿಗಳು ತನ್ನಲ್ಲಿ ಆಗಮಿಸಿ ಕೆಎ20 ವಾಹನಗಳಿಗೆ ವಿನಾಯತಿ, ಸರ್ವಿಸ್ ರಸ್ತೆ ಬೇಡಿಕೆ ಮುಂದಿಟ್ಟು ಮನವಿ ನೀಡಿದ್ದರು. ಅವರ ಮನವಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ನೀಡಿದ್ದು ಅದನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದೆ. ತಾನು ಜನವರಿ 30 ರಂದು ಮುಖ್ಯಮಂತ್ರಿಗಳ ಸಭೆಗೆ ಬೆಂಗಳೂರಿಗೆ ತೆರಳಿದ ವೇಳೆ ಪ್ರಾಧಿಕಾರದವರು ಟೋಲ್ ಸಂಗ್ರಹಕ್ಕೆ ಆರಂಭಿಸಿದ್ದು, ಪ್ರತಿಭಟನೆ ಆರಂಭವಾದ ಕಾರಣ ಅಲ್ಲಿಂದಲೇ ಟೊಲ್ ಸಂಗ್ರಹ ಮಾಡದಂತೆ ಸೂಚನೆ ನೀಡಿದ್ದೆ.
ಫೆಬ್ರವರಿ 1 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ತಮ್ಮನ್ನು ಭೇಟಿ ಮಾಡಿ ಟೋಲ್ ಸಂಗ್ರಹಕ್ಕೆ ಪೋಲಿಸ್ ಬಂದೋಬಸ್ತು ಒದಗಿಸುವಂತೆ ಮನವಿ ಮಾಡಿದ್ದರು. ನಾನು ಈ ವೇಳೆ ಸ್ಥಳೀಯ ಸಮಸ್ಯೆಗಳ ಕುರಿತು ಅವರಿಗೆ ತಿಳಿಸಿದಾಗ ಸ್ಥಳಿಯ ವಾಹನಗಳಿಗೆ ವಿನಾಯತಿ ನೀಡಬೇಕು ಎಂದಾಗ ಅದಕ್ಕೆ ಒಪ್ಪಿಗೆ ನೀಡಿಲ್ಲ ಬದಲಾಗಿ 20 ಕಿಮಿ ಒಳಗಿನ ವಾಹನಗಳಿಗೆ ರೂ 235 ಪಾಸ್ ವ್ಯವಸ್ಥೆ ಮಾಡಿದ್ದು, ಪೂರ್ಣ ವಿನಾಯಿತಿ ಅಸಾಧ್ಯ ಎಂದು ಹೇಳಿದ್ದರು. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರದ ಒಪ್ಪಂದಂತೆ ಟೋಲ್ ಸಂಗ್ರಹ ನಿಗದಿತ ಸಮಯದಲ್ಲೇ ಆರಂಭಿಸಬೇಕು ತಪ್ಪಿದಲ್ಲಿ ರಾಜ್ಯ ಸರಕಾರದ ವಿರುದ್ದ ನಷ್ಟ ಪರಿಹಾರಕ್ಕಾಗಿ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದ್ದರು. ಈ ನಡುವೆ ಫೆಬ್ರವರಿ 3 ರಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಸಂಪೂರ್ಣ ಕಾಮಗಾರಿ ಮುಗಿಯುವ ಮೊದಲು ಟೋಲ್ ಸಂಗ್ರಹಿಸದಂತೆ ಕೋರಿ ಪತ್ರ ಬರೆದಿದ್ದಾರೆ. ಅಲ್ಲದೆ ಫೆಬ್ರವರಿ 4 ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೂರ್ಣಗೊಂಡ ಕಾಮಗಾರಿಯ ಕುರಿತು ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಪಿಡಬ್ಲೂಡಿ ಇಂಜಿನಿಯರ್ ನೇತೃತ್ವದ ಸಮಿತಿ ಸಮೀಕ್ಷೆ ನಡೆಸಿದ್ದು 90.8 ಕಿಮಿ ಕಾಮಗಾರಿಯಲ್ಲಿ 8 ಕಿಮಿ ಕಾಮಾಗಾರಿ ನಡೆಯಲು ಬಾಕಿ ಇದೆ ಅಲ್ಲದೆ ಸರ್ವಿಸ್ ರಸ್ತೆ ಕಾಮಾಗಾರಿ ಬಾಕಿ ಇದೆ ಎಂದು ವರದಿ ನೀಡಿದ್ದಾರೆ. ಫೆಬ್ರವರಿ 9 ರಂದು ಪಿಡಬ್ಲ್ಯೂಡಿ ಸಚಿವಾಲಯ ಟೋಲ್ ಸಂಗ್ರಹಕ್ಕೆ ಸೂಚನೆ ನೀಡಿದ್ದು ಅದರಂತೆ ಕೆಎ 20 ವಾಹನಗಳಿಗೆ 20 ಕಿಮಿ ವ್ಯಾಫ್ತಿಯ ವಾಹನಗಳಿಗೆ ರೂ 135 ಹಾಗೂ 5 ಕಿಮ ವ್ಯಾಪ್ತಿಯ ವಾಹನಗಳಿಗೆ 110 ರೂಗಳ ಪಾಸ್ ನೀಡಲು ಒಪ್ಪಿ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹ ಆರಂಭಿಸಿದ್ದು ಅದಕ್ಕೆ ಪೋಲಿಸ್ ಬಂದೋಬಸ್ತ್ ಒದಗಿಸಲು ನೀಡಿದ ಸೂಚನೆಯಂತೆ ಭದ್ರತೆ ನೀಡಲಾಗಿದೆ.
ಈ ನಡುವೆ ಪ್ರತಿಭಟನಾಕಾರರು 13 ರಂದು ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಆಸ್ತಿಪಾಸ್ತಿಯ ರಕ್ಷಣೆಯ ಉದ್ದೇಶದಿಂದ ಸೆಕ್ಷನ್ 144 ಜಾರಿಗೆ ಗೊಳಿಸಿದ್ದು, ಈ ನಡುವೆ ಪ್ರತಿಭಟನೆಯ ಫಲವಾಗಿ 5 ಕಿಮಿ ವ್ಯಾಪ್ತಿಯಲ್ಲಿ ಫೆಬ್ರವರಿ 25 ರ ವರೆಗೆ ಕೆಎ20 ವಾಹನಗಳಿಗೆ ವಿನಾಯತಿ ನೀಡಿದ್ದಾರೆ.
ಪ್ರತಿಭಟನೆಯ ಮಾಹಿತಿಯ ವರದಿಯನ್ನು ಸರಕಾರಕ್ಕೆ ನೀಡಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಬೆಂಗಳೂರಿನಲ್ಲಿ ಈ ಕುರಿತು ಸಭೆ ಕರೆಯುವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದ್ದು, ಈ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶವನ್ನು ಪಾಲಿಸುವುದು ನನ್ನ ಕರ್ತವ್ಯ ಅದರಂತೆ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಕುರಿತು ಪ್ರತಿಭಟನಾಕಾರರು ಕಠೋರವಾದ ಮಾತುಗಳನ್ನು ಕೂಡ ಆಡಿದ್ದು, ಬೇಸರ ತಂದಿದೆ. ಸರಕಾರಿ ನೌಕರನಾಗಿ ಸರಕಾರದ ಕೆಲಸ ಮಾಡುತ್ತಿದ್ದು, ಸರಕಾರ ವರ್ಗಾವಣೆ ನೀಡಿದರೆ ಇಲ್ಲಿಂದ ಮತ್ತೊಂದೆಡೆಗೆ ಹೋಗುವುದು ನನ್ನ ಕರ್ತವ್ಯ ಅದರಲ್ಲಿ ಯಾವುದೇ ಬೇಸರವಿಲ್ಲ ಎಂದರು.