ಟೋಲ್ ಸಂಗ್ರಹ: ಯಥಾಸ್ಥಿತಿ ಕಾಪಾಡುವಂತೆ ಪಿಡಬ್ಲ್ಯುಡಿ ಸಿಎಸ್ ಲಕ್ಷ್ಮೀನಾರಾಯಣ ಸೂಚನೆ
ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹದ ಕುರಿತು ಉಂಟಾಗಿರುವ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಶುಕ್ರವಾರ ಬೆಂಗಳೂರಿನಲ್ಲಿ ಲೋಕೊಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ ಲಕ್ಷ್ಮೀನಾರಾಯಣ ಅವರ ಅಧ್ಯಕ್ಷತೆಯಲ್ಲಿ ಎರಡು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಹೋರಾಟಗಾರರ ಸಭೆ ನಡೆಯಿತು.
ಸಭೆಯಲ್ಲಿ ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ಮಂಗಳೂರು ಮತ್ತು ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬರುವ ಸಾಸ್ತಾನ, ಹೆಜಮಾಡಿ, ಸುರತ್ಕಲ್, ತಲಪಾಡಿ ಟೋಲ್ ಕೇಂದ್ರಗಳಲ್ಲಿ ಸ್ಥಳೀಯರಿಗೆ ಉಚಿತ ವಾಹನ ಪ್ರವೇಶಕ್ಕೆ ಅವಕಾಶ, ಹೆಜಮಾಡಿ ಮತ್ತು ಸುರತ್ಕಲ್ ಮಧ್ಯೆ ಕೇವಲ 12 ಕಿಮಿ ಅಂತರದಲ್ಲಿ ಎರಡು ಟೋಲ್ ಗೇಟ್ ಅಳವಡಿಸಿದ್ದು ಅದರಲ್ಲಿ ಒಂದನ್ನು ರದ್ದು ಮಾಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.
ಸ್ಥಳಿಯರುನ್ನು ಧಿಕ್ಕರಿಸಿ ಟೋಲ್ ಸಂಗ್ರಹಕ್ಕೆ ಮುಂದಾದರೆ ಇದರಿಂದ ಆಗುವ ಅನಾಹುತಕ್ಕೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಹೋಣೆಯಾಗಲಿದ್ದು, ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ತನಕ ಸ್ಥಳೀಯ ವಾಹನಗಳಿಗೆ ವಿನಾಯತಿ ನೀಡುವಂತೆ, ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಿದರು.
ಸಭೆಯಲ್ಲಿ ಧೀರ್ಘ ಸಮಾಲೋಚನೆ ಬಳಿಕ ಉತ್ತರಿಸಿದ ಲೋಕೊಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ ಲಕ್ಷ್ಮೀನಾರಾಯಣ ಅವರು ಕೆಲಸ ಪೂರ್ಣಗೊಳ್ಳುವ ತನಕ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗುವಂತೆ ನವಯುಗ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದರು ಅಲ್ಲದೆ ಸದ್ಯ ಸ್ಥಳೀಯ ಸ್ವಂತ ವಾಹನಗಳಿಗೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ವಾಣಿಜ್ಯ ವಾಹನಗಳಿಗೂ ಉಚಿತ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆ ಹಾಗೂ ಇತರ ಬೇಡಿಕೆಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವ ಯು ಟಿ ಖಾದರ್ ಅವರು ಭಾಗವಹಿಸದೆ ಇರುವುದಕ್ಕೆ ತಲಪಾಡಿ ಟೋಲ್ ಗೇಟ್ ವಿರುದ್ದ ಹೋರಾಟ ಸಮಿತಿ ಅಕ್ಷೇಪ ವ್ಯಕ್ತಪಡಿಸಿತು ಎನ್ನಲಾಗಿದೆ.
ಇದಲ್ಲದೆ ಉಡುಪಿ –ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಮಂಗಳೂರು ಜಿಲ್ಲಾಧಿಕಾರಿ ಜಗದೀಶ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್, ಹೋರಾಟಗಾರರಾದ, ದೇವಿಪ್ರಸಾದ್ ಶೆಟ್ಟಿ, ರಾಘವೇಂದ್ರ ಕಾಂಚನ್, ಪ್ರತಾಪ್ ಶೆಟ್ಟಿ, ಆಲ್ವಿನ್ ಅಂದ್ರಾದೆ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದರು.