ಡಾ. ಎಂ. ಮೋಹನ್ ಆಳ್ವರಿಗೆ ಸೌಹಾರ್ದ ಸಿರಿ ಪ್ರಶಸ್ತಿ
ಮೂಡುಬಿದಿರೆ: ಮುಸ್ಲಿಂ ಭಾಂದವ್ಯ ವೇದಿಕೆ ಕರ್ನಾಟಕದ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರಿಗೆ ಸೌಹಾರ್ದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೊ ಸಂಪಾಜೆ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೂಲಕ ಆಧುನಿಕ ಕಾಲಕ್ಕೆ ಅಗತ್ಯವಿರುವ ಶಿಕ್ಷಣ ವ್ಯವಸ್ಥೆ, ನೂತನ ಪ್ರಯೋಗಗಳನ್ನು ಹಳ್ಳಿಗಳಿಗೂ ತಲುಪಿಸುವ ಕಾರ್ಯವಾಗುತ್ತಿದೆ. ಅಲ್ಲದೇ ಮೂಡುಬಿದಿರೆಯ ಸಂಸ್ಕೃತಿಯ ಪರಂಪರೆಯನ್ನು ಮುಂದುವರಿಸಲು ಮೋಹನ್ ಆಳ್ವರು ಸೌಹಾರ್ದಯುತವಾಗಿ ಶ್ರಮಿಸುತ್ತಿದ್ದಾರೆ. ಇವರು ನಾಡಿನ ಅಸ್ಮಿತೆಯನ್ನು ಮೈಗೂಡಿಸಿಕೊಂಡು ವಿಶ್ವವ್ಯಾಪಕವಾಗಿ ಅಂಗೀಕೃತ ಹೊಂದಿರುವ ಓರ್ವ ಮಹಾನ್ ಸಾಧಕ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ. ಮೋಹನ್ ಆಳ್ವ, ಮನಸ್ಸು ಹಾಗೂ ಜೀವನ ಪದ್ಧತಿಯನ್ನು ಉತ್ತಮಗೊಳಿಸುವ ಮೂಲಕ ಸೌಹಾರ್ದ ಜೀವನ ನಡೆಸಲು ಸಾಧ್ಯ. ಬದುಕಿನ ಪ್ರತಿ ಹಂತದಲ್ಲೂ ಮೌಲ್ಯಯುತವಾಗಿರುವುದು ಬಹಳ ಅಗತ್ಯ. ತನ್ನ 73 ವರ್ಷಗಳ ಬದುಕಿನ ರೀತಿಗೆ ಸೌಹಾರ್ದ ಸಿರಿ ಪ್ರಶಸ್ತಿ ಸಂದಿರುವುದು ಬಹಳ ಸಂತೋಷದ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಮಹಮ್ಮದ್ ರಿಯಾಝ್ ಅವರ `ತುಳುನಾಡಿನ ಕೋಮು ಸಾಮರಸ್ಯ ಪರಂಪರೆ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಮುಸ್ಲಿಂ ಭಾಂದವ್ಯ ವೇದಿಕೆ ಅಧ್ಯಕ್ಷ ಸುಹೈಲ್ ಅಹಮದ್ ಮಾರೂರ್, ಗೌರವಾಧ್ಯಕ್ಷ ಕೋಟಾ ಇಬ್ರಾಹಿಂ ಸಾಹೇಬ್, ಮಾಜಿ ಅಧ್ಯಕ್ಷ ಅನೀಸ್ ಪಾಷಾ, ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್, ನಿವೃತ್ತ ನ್ಯಾಯಮೂರ್ತಿ ನಬಿರಸೂಲ್ ಮಹಮದಾಪೂರ್, ಅನುಪಮ ಮಾಸ ಪತ್ರಿಕೆಯ ಸಂಪಾದಕಿ ಶಹನಾಝ ಎಂ. ಉಪಸ್ಥಿತರಿದ್ದರು. ಡಾ. ಹಕೀಂ ತೀರ್ಥಹಳ್ಳಿ ವಂದಿಸಿದರು. ಡಾ. ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.