ಡಾ. ಮೋಹನ್ ಆಳ್ವಾರ ಬೆಂಬಲಕ್ಕೆ ಸಾಂಸ್ಕೃತಿಕ ಲೋಕ; ವ್ಯವಸ್ಥಿತ ಷಡ್ಯಂತ್ರ ಎಂದ –ಪ್ರಭಾಕರ ಜೋಶಿ
ಮಂಗಳೂರು: ಕ್ರೀಡಾಪಟು ಕಾವ್ಯಾಳ ಸಾವಿನ ಹಿಂದೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಗೆ ಕಾರಣವಾದ ಡಾ ಮೋಹನ್ ಆಳ್ವಾರ ಹೆಸರು ಕೆಡಿಸುವ ವ್ಯವಸ್ಥಿತ ಷ್ಯಡ್ಯಂತ್ರ ಅಡಗಿದೆ ಎಂದು ಖ್ಯಾತ ಕಲಾವಿದ ಪ್ರಭಾಕರ ಜೋಶಿ ಅವರು ಹೇಳಿದರು.
ಅವರು ನಗರದ ಪುರಭವನದಲ್ಲಿ ಸಮಾನ ಮನಸ್ಕ ಸಂಘಟನೆಗಳು ಹಾಗೂ ಕಲಾವಿದರು ಸೇರಿ ಡಾ ಮೋಹನ ಆಳ್ವಾರ ಬೆಂಬಲಕ್ಕಾಗಿ ಆಯೋಜಿಸಿದ ಆಳ್ವಾರೊಂದಿಗೆ ನಾವು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜುಲೈ 20 ರಂದು 10 ನೇ ತರಗತಿಯ ವಿದ್ಯಾರ್ಥಿನಿ ಕಾವ್ಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯಾರಿಗೂ ಆತ್ಮಹತ್ಯೆಯ ನಿಜವಾದ ಕಾರಣ ಇನ್ನೂ ತಿಳಿದಿಲ್ಲ ಆದರೆ ಮಾಧ್ಯಮಗಳು ಆಳ್ವಾರನ್ನು ಆರೋಪಿ ಎಂಬಂತೆ ಬಿಂಬಿಸುತ್ತಿವೆ. ಮಾಧ್ಯಮಗಳ ಚರ್ಚೆಯ ವೇಳೆ ಪ್ರತಿಯೊಂದು ಪ್ರಶ್ನೆಗೂ ಆಳ್ವಾರು ತಾಳ್ಮೆಯಿಂದ ಉತ್ತರಿಸಿದ್ದಾರೆ. ಡಾ ಆಳ್ವಾರು ಕಲೆಯ ಸಂಸ್ಕೃತಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಕೆಲವೊಂದು ಮಂದಿ ಮರೆತಿದ್ದಾರೆ.
ಡಾ ಆಳ್ವಾರು ಯಾವುದೇ ಪುಸ್ತಕವನ್ನು ಬರೆದಿಲ್ಲ ಆದರೆ ಅವರೇ ಒಂದು ತೆರೆದ ಪುಸ್ತಕವಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಆಳ್ವಾರು ಯಾವುದೇ ತಪ್ಪನ್ನು ಮಾಡದೆ ಇಂದು ಆರೋಪಿಸ ಸ್ಥಾನದಲ್ಲಿ ನಿಂತಿದ್ದಾರೆ. ಅವರು ಘನತೆಗೆ ಮಸಿ ಬಳಿಯುವ ಕೆಲಸ ಸರಿಯಲ್ಲ ಅವರಿಗೆ ದೂಷಿಸುವ ಮುನ್ನ ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ನಮಗೂ ಕಾವ್ಯಾಳ ಅನುಮಾಸ್ಪದ ಸಾವಿನ ಕುರಿತು ಕಾಳಜಿ ಇದ್ದು ಅದಕ್ಕಾಗಿ ಆಳ್ವಾರನ್ನು ಗುರಿಯಾಗಿಸಿರುವುದು ಸರಿಯಲ್ಲ. ಘಟನೆಯಲ್ಲಿ ಆಳ್ವಾ ಹಾಗೂ ಅವರ ಸಂಸ್ಥೆಗಳ ಹೆಸರನ್ನು ಕೆಡಿಸುವ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎನ್ನುವುದು ಸ್ಪಷ್ಟ. ಕಾವ್ಯಾಳ ಸಾವಿನ ಕುರಿತಾದ ನಿಜವಾದ ಸತ್ಯ ಹೊರಬರಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ಸಹನಾ ಕುಮಾರಿ ಮಾತನಾಡಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂಲಕ ಸಾವಿರಾರು ಕ್ರೀಡಾಪಟುಗಳು ಹೊರಬರಲು ಕಾರಣವಾಗಿದ್ದು, ಯಾವುದೇ ಕ್ರೀಡಾಪಟು ಪದಕ ಗೆದ್ದ ಕೂಡಲೇ ಆಳ್ವಾರು ಅವರಿಗೆ ಬೆಂಬಲವಾಗಿ ರೂ 25000 ನಗದು ಮೊತ್ತದೊಂದಿಗೆ ಗೌರವಿಸುವುದರೊಂದಿಗೆ ಕ್ರೀಡೆಯಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡುತ್ತಾರೆ. ಇಂದು ಜನರು ಒಳ್ಳೆಯ ವಿಷಯಕ್ಕೆ ಬೆಂಬಲ ನೀಡುವುದಿಲ್ಲ ಇದು ನಮ್ಮ ಇಂದಿನ ದುರಂತವೇ ಸರಿ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ 50% ವಿದ್ಯಾರ್ಥಿಗಳು ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದು, ಆಳ್ವಾರು ಎಂದು ಕೂಡ ಜಾತಿ ಭೇಧವನ್ನು ಮಾಡಿದವರಲ್ಲ. ಕಾವ್ಯಾಳ ಸಾವಿನ ಕುರಿತು ಸಂತಾಪವಿದ್ದು, ಸೂಕ್ತ ತನಿಖೆಯಿಂದ ಸತ್ಯ ಹೊರಬರಬೇಕು ಎನ್ನುವುದು ನಮ್ಮ ಆಗ್ರಹ ಎಂದರು.
ಕರ್ನಲ್ ಎನ್ ರೈ, ಸದಾನಂದ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಚಂದ್ರ ಶೇಖರ್ ನಾವಡ, ಪ್ರದೀಪ್ ಕುಮಾರ್ ಕಲ್ಕೂರ, ಚಂದ್ರಶೇಖರ್ ಶೆಟ್ಟಿ, ಡಾ ವಸಂತ ಪೆರ್ಲ, ಹಾಗೂ ಇತರರು ಉಪಸ್ಥಿತರಿದ್ದರು.