ಡಾ. ಸದಾನಂದ ಪೆರ್ಲರಿಗೆ ಮಾಣಿಲ ಕುಕ್ಕಾಜೆ ಕ್ಷೇತ್ರ ಸನ್ಮಾನ
ಬಂಟ್ವಾಳ : ಮಾಧ್ಯಮರಂಗ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲರಿಗೆ ಬಂಟ್ವಾಳ ತಾಲೂಕಿನ ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ದೇವಸ್ಥಾನದಲ್ಲಿ ನಡೆದ 51 ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಗೌರವಯುತವಾಗಿ ಸನ್ಮಾನಿಸಲಾಯಿತು.
ಮಾಧ್ಯಮರಂಗದಲ್ಲಿ ಸುಮಾರು 25 ವರ್ಷಗಳಿಂದಲೂ ಅಧಿಕ ಕಾಲ ಸೇವೆ ಮಾಡಿ ವಿನೂತನ ಕಾರ್ಯಕ್ರಮಗಳ ಮೂಲಕ ಜನಮುಖಿ ಚಿಂತನೆವೊದಗಿಸಿ ವಿಚಾರ ಸಾಹಿತ್ಯ ಹಾಗೂ ಸಂಶೋಧನಾ ನೆಲೆಯ ಸಾಹಿತ್ಯ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸೇವೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಆಕಾಶವಾಣಿಯಲ್ಲಿ ಕನ್ನಡ-ತುಳು ಕಾರ್ಯಕ್ರಮಗಳ ಮೂಲಕ ಜನಾನುರಾಗಿ ಕಾರ್ಯಕ್ರಮ ಅಧಿಕಾರಿಯಾಗಿ ಕೇಳುಗರ ದೊಡ್ಡ ವಲಯ ಸೃಷ್ಟಿಸಿದ್ದಾರೆ. ಬಾನುಲಿಗ್ರಾಮಾಯಣ, ಗಾಂಪಣ್ಣನ ತಿರ್ಗಾಟ, ಸ್ವರ ಮಂಟಮೆ ಮೊದಲಾದವು ಜನಮೆಚ್ಚುಗೆ ಪಡೆದುವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸೇವಾ ಕಾರ್ಯ ಗುರುತಿಸುವ ಕೆಲಸ ಇದಾಗಿದೆ ಎಂದು ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಅಭಿಪ್ರಾಯ ಪಟ್ಟರು.
ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶಾಲು,ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಿದರು. ಪಾರಮಾರ್ಥಿಕ ಸಾಧಕನೋರ್ವ ಎಂದೂ ತನಗಾಗಿ ಬದುಕುವುದಿಲ್ಲ ಇತರರಿಗಾಗಿ ಬದುಕಿ ಸಮಾಜೋದ್ಧಾರ ಮಾಡುತ್ತಾನೆ. ಆ ನೆಲೆಯಲ್ಲಿ ಬಾಳಿದ ಕುಕ್ಕಾಜೆ ಕ್ಷೇತ್ರ ನಿರ್ಮಾತೃ ದಿ. ತನಿಯಪ್ಪ ಪೂಜಾರಿಯವರ ಧಾರ್ಮಿಕ ಸೇವೆಯನ್ನು ಮಾಣಿಲಶ್ರೀ ಗುಣಗಾನ ಮಾಡಿದರು.
ಇದೇ ಸಂದರ್ಭದಲ್ಲಿ ಗೆಜ್ಜೆಗಿರಿನಂದನ ಬಿತ್ತ್ಲ್ನ ನಾಟಿವೈದ್ಯೆ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಶ್ರೀ ಕ್ಷೇತ್ರದ ಧರ್ಮದರ್ಶಿ ಎಂ.ಕೆ ಕುಕ್ಕಾಜೆ, ವಿಟ್ಲ ಯುವ ಬಿಲ್ಲವ ಸಂಘಟನೆ ಅಧ್ಯಕ್ಷ ಚಂದ್ರಹಾಸ ಸುವರ್ಣ, ಸಾಮಾಜಿಕ ಕಾರ್ಯಕರ್ತ ಸೂರಜ್ ರೈ, ಭಾಸ್ಕರ ಕಾಸರಗೋಡು ಮತ್ತಿತರ ಗಣ್ಯರು ಹಾಜರಿದ್ದರು.