ಡಾ. ಹಾರೂನ್ ದಂಪತಿಯನ್ನೊಳಗೊಂಡ ತಂಡದಿಂದ ವಿನೂತನ ವೈದ್ಯಕೀಯ ಸಾಧನ ಅವಿಷ್ಕಾರ

Spread the love

ಡಾ. ಹಾರೂನ್ ದಂಪತಿಯನ್ನೊಳಗೊಂಡ ತಂಡದಿಂದ ವಿನೂತನ ವೈದ್ಯಕೀಯ ಸಾಧನ ಅವಿಷ್ಕಾರ

ಮಂಗಳೂರು: ನಗರದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (ಕೆಎಂಸಿ)ಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಸನ ಮೂಲದ ಖ್ಯಾತ ವೈದ್ಯ ದಂಪತಿ ಡಾ. ಹಾರೂನ್ ಎಚ್. ಮತ್ತು ಡಾ. ಸಮೀನಾ ಅವರನ್ನೊಳಗೊಂಡ ಸಂಶೋಧನಾ ತಂಡವು ಸ್ತ್ರೀರೋಗಗಳ ಶೀಘ್ರ ಪತ್ತೆ ಮತ್ತು ನಿರ್ಣಯಕ್ಕೆ ಸಹಕಾರಿಯಾಗುವ ವಿನೂತನ ಸಾಧನವನ್ನು ಅವಿಷ್ಕರಿಸಿದೆ.

ಮಹತ್ವದ ಹೆಜ್ಜೆಯಾಗಿ, ಈ ಸಾಧನಕ್ಕೆ ಪೇಟೆಂಟ್ ಪಡೆಯುವ ನಿಟ್ಟಿನಲ್ಲಿ ಅಧಿಕೃತವಾಗಿ ಸಲ್ಲಿಕೆಯಾಗಿರುವ ಅರ್ಜಿ ಸ್ವೀಕೃತವಾಗಿದೆ.

ಇಂಟರ್ನಲ್ ಮೆಡಿಸಿನ್ ಕನ್ಸಲೆಂಟ್ ಡಾ. ಎಚ್. ಹಾರೂನ್ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಕನ್ಸಲ್ವೆಂಟ್ ಡಾ. ಎಚ್. ಸಮೀನಾ ಸೇರಿದಂತೆ ಮಂಗಳೂರು ಕೆಎಂಸಿ, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಸಂಶೋಧಕರ ತಂಡದ ಎಂಐಟಿ ಮಣಿಪಾಲದ ಡಾ. ಚಿರಂಜಿತ್ ಘೋಷ್ ಹಾಗೂ ವಿದ್ಯಾರ್ಥಿ ಸಂಶೋಧಕರಾದ ಕ್ರಿಶಾ ಜನಸ್ವಾಮಿ, ಶಶಾಂಕ್ ಸಂಜಯ್, ಆದಿತ್ಯ ಹರಿಕೃಷ್ಣನ್ ನಂಬೂದಿರಿ ಮತ್ತು ಶುಭಂ ಭುಸಾರಿ ಈ ವಿನೂತನ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿರುವ ಸಾಧನವು ಪರಿಣಾಮಕಾರಿ ಮಾದರಿಗಾಗಿ ತಿರುಗುವ ಬ್ರಶ್‌ ನೊಂದಿಗೆ ಹೊಂದಿಕೊಳ್ಳುವ ಪ್ರೋಬ್ ಜತೆಗೆ ಕಿಣ್ಣ- ಲೇಪಿತ ಪತ್ತೆ ವ್ಯವಸ್ಥೆಯನ್ನು ಹೊಂದಿದೆ. ಈ ವಿಶೇಷ ವಿನ್ಯಾಸವನ್ನು ನಿರ್ದಿಷ್ಟವಾಗಿ ಸ್ತ್ರೀರೋಗಗಳ ಆರಂಭಿಕ ಪತ್ತೆ ಮತ್ತು ರೋಗ ನಿರ್ಣಯ ವಿಧಾನವನ್ನು ಸುಧಾರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.

ಗೈನಕಾಲಜಿ ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಹೊಂದಿರುವ ವಯಸ್ಸಾದ ಮಹಿಳೆಯರಿಗೆ ಈ ಸಾಧನವು ಸ್ತ್ರೀರೋಗಗಳ ಪತ್ತೆಗೆ ಹೆಚ್ಚು ಸುಲಭವಾದ ಮತ್ತು ಬಳಕೆದಾರ ಸ್ನೇಹಿ ವಿಧಾನವನ್ನು ಒದಗಿಸುವ ಮೂಲಕ ಮಹಿಳೆಯರ ಆರೋಗ್ಯ ರಕ್ಷಣೆಯನ್ನು ಸರಳಗೊಳಿಸಲಿದೆ.

ಸಂಶೋಧಕ ವೈದ್ಯ ತಂಡದ ಈ ಸಾಧನೆಯ ಕುರಿತಂತೆ ‘ಕೆಎಂಸಿ ಮಂಗಳೂರು’ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೈದ್ಯಕೀಯ ಆವಿಷ್ಕಾರಕ್ಕೆ ತಂಡವನ್ನು ಅಭಿನಂದಿಸಿದೆ.

ಡಾ.ಹಾರೂನ್ ಹಾಸನದ ಅರೇಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಎಂ.ಹುಸೇನ್ ಮತ್ತು ದಿವಂಗತ ಅಖಿಲಾ ಬೇಗಂ ಅವರ ಪುತ್ರರಾಗಿದ್ದಾರೆ. ಡಾ.ಸಮೀನಾ ಹಾರೂನ್ ಅವರು ಮಂಗಳೂರಿನ ಕೆ.ಎ.ಸಾದಿಕ್ ಮತ್ತು ಮೈಮೂನಾ ದಂಪತಿಯ ಪುತ್ರಿಯಾಗಿದ್ದಾರೆ. ಡಾ. ಚಿರಂಜಿತ್ ಘೋಷ್ ಎಂಐಟಿ ಮಣಿಪಾಲದ ಪ್ರಮುಖ ಸಂಶೋಧಕರಾಗಿದ್ದು, ಅವರ ಕಾರ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮತ್ತು ಅವರು ಅತ್ಯಾಧುನಿಕ ಸಂಶೋಧನೆಯ ಮೂಲಕ ಆರೋಗ್ಯ ಕ್ಷೇತ್ರದ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments