ಡಿಕೆಶಿಯವರಿಗೆ ಹಿಂದುತ್ವದ ಭದ್ರಕೋಟೆ ಕರಾವಳಿಗೆ ಸ್ವಾಗತ ಕೋರಿದ ಸುನೀಲ್ ಕುಮಾರ್!
ಉಡುಪಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಉಡುಪಿ ಜಿಲ್ಲೆಯ ಮೂರು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಕಾಪು ಶ್ರೀ ಹಳೆ ಮಾರಿಗುಡಿ ಬ್ರಹ್ಮಕಲಶೋತ್ಸವ ಗದ್ದುಗೆ ಪ್ರತಿಷ್ಠೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ನಾಯಕರ ಸಭೆ, ಕಾರ್ಕಳದಲ್ಲಿ ನಡೆಯಲಿರುವ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ಕಾರ್ಕಳ ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ವಿಭಿನ್ನವಾಗಿ ಡಿಕೆ ಶಿವಕುಮಾರ್ಗೆ ಸ್ವಾಗತ ಕೋರಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಿಂದುತ್ವದೆಡೆಗೆ ಹೆಜ್ಜೆ ಹಾಕಲು ಮನ ಮಾಡುತ್ತಿರುವ ಡಿಕೆ ಶಿವಕುಮಾರ್ಗೆ ಹಿಂದುತ್ವದ ಭದ್ರ ಕೋಟೆಗೆ ಸ್ವಾಗತ ಎಂದು ಸುನಿಲ್ ಕುಮಾರ್ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭ ಮೇಳದಲ್ಲಿ ಮಿಂದ, ಎಐಸಿಸಿ ಮುನಿಸಿನ ಮಧ್ಯೆಯೂ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ನಿಂದ, ಹಿಂದುವಾಗಿ ಹುಟ್ಟಿ ಹಿಂದುವಾಗಿಯೇ ಸಾಯುವೆ ಎಂದ, ಹಿಂದುತ್ವದೆಡೆಗೆ ಹೆಜ್ಜೆ ಹಾಕಲು ಮನಸ್ಸು ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಗಂಡುಮೆಟ್ಟಿನ ನೆಲ, ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆತ್ಮೀಯ ಸ್ವಾಗತ. ನಿಮ್ಮ ಈ ಭೇಟಿ ಹಿಂದುತ್ವ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಫಲಪ್ರದವಾಗಲಿ’’ ಎಂದು ಸುನಿಲ್ ಕುಮಾರ್ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.