ಡಿಕೆಶಿ ಮನೆ ಮೇಲೆ ತೆರಿಗೆ ಇಲಾಖೆ ದಾಳಿ; ಯುವ ಕಾಂಗ್ರೆಸಿನಿಂದ ಐಟಿ ಕಚೇರಿಗೆ ಕಲ್ಲು ತೂರಾಟ
ಮಂಗಳೂರು: ರಾಜ್ಯದ ಇಂಧನ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ನಡೆದ ದಾಳಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅತ್ತಾವರಲ್ಲಿನ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಧಾಳಿಯಿಂದ ಆಕ್ರೋಶಗೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಎಸಿ ವಿನಯ್ ರಾಜ್ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಮೋದಿಯ ವಿರುದ್ದ ಘೋಷಣೆ ಕೂಗಿದ್ದಲ್ಲದೆ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ಕಲ್ಲುತೂರಾಟ ನಡೆಸಿದರು. ಅಲ್ಲದೆ ಟಯರುಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸಿ ವಿನಯ್ ರಾಜ್ ಅವರು ಬಿಜೆಪಿ ಅಧಿಕಾರಕ್ಕೆ ಬರುವ ಸಲುವಾಗಿ ಕುದುರೆ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಇದೇ ರೀತಿಯ ಕುದುರೆ ವ್ಯಾಪಾರ ನಡೆಸಿ ಗೋವಾ, ಮಣಿಪುರದಲ್ಲಿ ಕೂಡ ಅಧಿಕಾರ ಪಡೆದ ಬಿಜೆಪಿ ಈಗ ಗುಜರಾತಿನಲ್ಲಿ ಕೂಡ ಅದೇ ಚಾಳಿಯನ್ನು ಮುಂದುವರೆಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ. ಐಟಿ ಇಲಾಖೆಯನ್ನು ಬಳಸಿಕೊಂಡು ಕೇಂದ್ರ ಸರಕಾರ ಅಧಿಕಾರ ದುರುಪಯೋಗ ಮಾಡುತ್ತಿದೆ ಎಂದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಪೋಲಿಸರು ಪ್ರತಿಭಟನಾಕಾರರನ್ನು ಮಧ್ಯಪ್ರವೇಶಿಸಿ ಸಂಭ್ಯಾವ್ಯ ನಷ್ಟವನ್ನು ತಡೆದರು