ಡಿಸೆಂಬರ್ 23 ರಿಂದ 2016-17 ನೇ ಸಾಲಿನ ಕರಾವಳಿ ಉತ್ಸವ ಆರಂಭ
ಮಂಗಳೂರು: 2016-17 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವವನ್ನು ದಿನಾಂಕ: 23-12-2016 ರಿಂದ 01-01-2017 ರವರೆಗೆ ಅತ್ಯಂತ ವಿಜ್ರಂಭಣೆಯಿಂದ ಕರಾವಳಿ ಉತ್ಸವ ಮೈದಾನ, ಕದ್ರಿ ಉದ್ಯಾನವನ, ಪಣಂಬೂರು ಕಡಲ ತೀರದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ ಡಿಸೆಂಬರ್ 23ರಂದು ಸಂಜೆ 4.00 ಗಂಟೆಗೆ ಕರಾವಳಿ ಉತ್ಸವದ ಅಂಗವಾಗಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಬಿ ರಮಾನಾಥ ರೈ, ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು, ಕರ್ನಾಟಕ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ವಸ್ತು ಪ್ರದರ್ಶನದ ಉದ್ಫಾಟನೆಯನ್ನು ನೆರವೇರಿಸಲಿದ್ದಾರೆ. ಕರಾವಳಿ ಉತ್ಸವ ಮೈದಾನದಿಂದ ಕದ್ರಿ ಉದ್ಯಾನವನದವರೆಗೆ ಕರಾವಳಿ ಉತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಯು.ಟಿ ಖಾದರ್, ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವರು ಮೆರವಣಿಗೆಯ ಉದ್ಫಾಟನೆಯನ್ನು ನೆರವೇರಿಸಲಿದ್ದಾರೆ. ಸಂಜೆ 6.00 ಗಂಟೆಗೆ ಕದ್ರಿ ಉದ್ಯಾನವನದಲ್ಲಿ ಕರಾವಳಿ ಉತ್ಸವದ ಉದ್ಫಾಟನಾ ಸಮಾರಂಭವನ್ನು ಕಲಾಯಮಾಮಣಿ ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್, ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರು ನೆರವೇರಿಸಲಿದ್ದಾರೆ.
ಕರಾವಳಿ ಉತ್ಸವದ ಅಂಗವಾಗಿ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಉದ್ಯಾನವನದಲ್ಲಿ ಸಂಜೆ 6.00 ಗಂಟೆಗೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಬಾರಿ ವಿಶೇಷವಾಗಿ ಯುವ ಉತ್ಸವವನ್ನು ಆಯೋಜಿಸಲಾಗಿದೆ. ಆ ಪ್ರಯುಕ್ತ ದಿನಾಂಕ: 29-12-2016 ಹಾಗೂ 30-12-2016 ರಂದು ಕದ್ರಿ ಉದ್ಯಾನವನದಲ್ಲಿ ಸಂಜೆ :5 ಗಂಟೆಯಿಂದ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕರಾವಳಿ ಉತ್ಸವದ ಅಂಗವಾಗಿ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸಲಾಗಿದೆ. ಅದರಂತೆ ದಿನಾಂಕ 24-12-2016 ರಂದು ಬೆಳಗ್ಗೆ 9-30 ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಾಲಿಬಾಲ್ ಪಂದ್ಯಾಟ ನಡೆಯಲಿರುತ್ತದೆ. ದಿನಾಂಕ 31-12-2016 ರಂದು ಬೆಳಿಗ್ಗೆ 10-00 ಕ್ಕೆ ಕರಾವಳಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪುರುಷರ ಮುಕ್ತ ಹಾಕಿ ಪಂದ್ಯಾಟ ನಡೆಯಲಿರುತ್ತದೆ. ಹಾಗೂ ದಿನಾಂಕ 01-01-2017 ರಂದು ಬೆಳಿಗ್ಗೆ 9-00 ಕ್ಕೆ ಮಹಾನಗರಪಾಲಿಕೆ ಈಜುಕೊಳ ಲೇಡಿಹಿಲ್, ಮಂಗಳೂರು ಇಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆ ನಡೆಯಲಿರುತ್ತದೆ.
30-12-2016, 31-12-2016 ಹಾಗೂ 01-01-2017 ರಂದು ಪಣಂಬೂರು ಕಡತ ಕಿನಾರೆಯಲ್ಲಿ ಬೀಚ್ ಉತ್ಸವವನ್ನು ಆಯೋಜಿಸಲಾಗಿದೆ. ಆ ಪ್ರಯುಕ್ತ ಬೆಳಿಗ್ಗೆ ವಿವಿಧ ಕ್ರೀಡಾ ಪಂದ್ಯಾಟಗಳು ಜರುಗಲಿದ್ದು, ಸಾಯಂಕಾಲ ಆಹಾರೋತ್ಸವ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಾಳಿಪಟ ಸ್ಪರ್ಧೆ, ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಬಾರಿ ವಿಶೇಷವಾಗಿ ಎಲ್ಲಾ ತಾಲೂಕುಗಳಿಯು ತಾಲೂಕು ಮಟ್ಟದ ಕರಾವಳಿ ಉತ್ಸವ ಆಯೋಜಿಸಲಾಗಿದೆ. ಆ ಪ್ರಯುಕ್ತ ದಿನಾಂಕ: 19-12-2016 ರಂದು ಬಂಟ್ವಾಳ ತಾಲೂಕಿನಲ್ಲಿ ಹಾಗೂ ದಿನಾಂಕ :18-12-2016 ರಂದು ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕಿನಲ್ಲಿ ಕರಾವಳಿ ಉತ್ಸವ ಆಯೋಜಿಸಲಾಗಿದೆ.
01-01-2017 ರಂದು ಭಾನುವಾರ ಸಂಜೆ 6-00 ಗಂಟೆಗೆ ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಹಾಗೂ ಕರಾವಳಿ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿರುತ್ತದೆ. ಬಿ. ರಮಾನಾಥ ರೈ, ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು, ಕರ್ನಾಟಕ ಸರ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕರಾವಳಿ ಉತ್ಸವದ ಸಮಾರೋಪ ಸಮಾರಂಭ ಹಾಗೂ ಕರಾವಳಿ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.