ಡಿ.ಸಿ., ಎ.ಸಿ., ಮೇಲೆ ಹಲ್ಲೆ – ಸಿಪಿಐ(ಎಂ) ಜಿಲ್ಲಾ ಸಮಿತಿ ಖಂಡನೆ
ಉಡುಪಿ: ಅಕ್ರಮ ಮರಳುಗಾರಿಕೆ ವಿರುದ್ದ ಧಾಳಿ ನಡೆಸಿದ್ದ ಉಡುಪಿ ಜಿಲ್ಲಾಧಿಕಾರಿ, ಕುಂದಾಪುರದ ಉಪ ವಿಭಾಗಾಧಿಕಾರಿ, ಅಂಪಾರು ಗ್ರಾಮಕರಣಿಕ ಹಾಗೂ ಇತರರ ಮೇಲೆ ನಡೆದ ಹಲ್ಲೆಯನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಸಭೆ ತೀವ್ರವಾಗಿ ಖಂಡಿಸಿದೆ.
ಹಿಂದೆ ಬಳ್ಳಾರಿ ಜಿಲ್ಲೆಯಗಣಿ ಮಾಫಿಯಾದಂತೆ, ಕರಾವಳಿ ಜಿಲ್ಲೆಗಳಲ್ಲಿ ಮರಳು ಮಾಫಿಯಾ ಬೆಳೆಯುತ್ತಿದೆ ಕಳೆದ 2-3 ವರ್ಷಗಳಿಂದ ಉಸ್ತುವಾರಿ ಸಚಿವರ ಹಾಗೂ ಸರಕಾರದ ಗಮನಕ್ಕೆ ತರಲಾಗಿತ್ತು. ಮರಳು ಮಾಫಿಯಾವು ಕೃತಕ ಅಭಾವ ಸೃಷ್ಟಿಸಿ ಯುನಿಟ್ ಗೆ ರೂ.1800ಕ್ಕೆ ಮಾರಾಟವಾಗುತ್ತಿದ್ದ ಮರಳು ದರವನ್ನು ರೂ.5000ಕ್ಕಿಂತ ಹೆಚ್ಚಿಗೆ ಹೋಗುವಂತೆ ಮಾಡಿದೆ. ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಮಾಡುವುದಾಗಿ ಸರಕಾರ ಘೋಷಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ.
ಎರಡು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು/ಕಾರ್ಯಕರ್ತರು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ ಎಂಬ ಅಂಶವನ್ನು ಜನರು ಹೇಳುತ್ತಿದ್ದಾರೆ.
ಮರಳು ಮಾಫಿಯಾದ ಒತ್ತಡದಿಂದಾಗಿಯೇ ಹಿಂದಿನ ಜಿಲ್ಲಾಧಿಕಾರಿಗಳ ವರ್ಗಾವಣೆ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ. ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರವು ಈ ಪಿಡುಗು ಹೆಚ್ಚುವಂತೆ ಮಾಡಿದೆ. ಇಂತಹ ಸನ್ನಿವೇಶದಲ್ಲಿ ಅಧಿಕಾರಿಗಳು ತೋರಿದ ಧೈರ್ಯ ಮೆಚ್ಚುವಂತಾದ್ದು.
ಈ ಕೂಡಲೇಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ರಾಜ್ಯ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ. ಅದೇ ಸಂದರ್ಭದಲ್ಲಿ ಸುಲಭ ದರದಲ್ಲಿ ಮರಳು ದೊರೆಯುವಂತೆ ವ್ಯವಸ್ಥೆ ಮಾಡಬೇಕೆಂದು ಸಿಪಿಐ(ಎಂ) ಆಗ್ರಹಿಸುತ್ತದೆ.