ಡಿ.14: ಉಡುಪಿಯಲ್ಲಿ ಪ್ರಥಮ ಬಾರಿಗೆ ಕೊರಿಯನ್ ತಂಡದಿಂದ ಕ್ರಿಸ್ಮಸ್ ಕ್ರಿಸ್ತೋತ್ಸವ – 2024 

Spread the love

ಡಿ.14: ಉಡುಪಿಯಲ್ಲಿ ಪ್ರಥಮ ಬಾರಿಗೆ ಕೊರಿಯನ್ ತಂಡದಿಂದ ಕ್ರಿಸ್ಮಸ್ ಕ್ರಿಸ್ತೋತ್ಸವ – 2024 

ಉಡುಪಿ: ಕ್ರಿಸ್ಮಸ್ ಹಬ್ಬ ಬಂದಿದೆ. ಹರುಷ ಜಗಕೆ ತಂದಿದೆ. ಸುಗುಣ ಶಾಂತಿ ಬೀರಿದೆ. ಇದು ಸಂಭ್ರಮ ಮತ್ತು ಸಡಗರದ ಸಮಯ. ಉಡುಪಿಯ ಯುನೈಟೆಡ್ ಕ್ರಿಶ್ಚಿಯನ್ ಫೋರಂ, ಲೊಂಬಾರ್ಡ್ ಮಿಶನ್ ಆಸ್ಪತ್ರೆ, ಕರ್ನಾಟಕ ಯುವಕ ಸಂಘ ಮತ್ತು ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಸಹಯೋಗದೊಂದಿಗೆ “ಕ್ರಿಸ್ಮಸ್ ಕ್ರಿಸ್ತೋತ್ಸವ -2024” ಎಂಬ ವಿಶಿಷ್ಠ ಕಾರ್ಯಕ್ರಮ ಆಯೋಜಿಸಲು ಮತ್ತು ಹಬ್ಬದ ಸಂತೋಷವನ್ನು ಇಮ್ಮಡಿಗೊಳಿಸಲು ಉಡುಪಿ ಜಿಲ್ಲೆ ಸಿದ್ದವಾಗಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿಯ ಸಂಚಾಲಕ ಡಾ. ಸುಶೀಲ್ ಜತ್ತನ್ನ ಹೇಳಿದರು.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಡಿಸೆಂಬರ್ 14 ರಂದು ಶನಿವಾರ ಉಡುಪಿ ಕ್ರಿಶ್ಚಿಯನ್ ಪಿಯು ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಕ್ರಿಸ್ತೋತ್ಸವ ಕಾರ್ಯಕ್ರಮವು ನೆರೆದ ಸಭಿಕರಿಗೆ ಸಾಂಸ್ಕೃತಿಕ ಮತ್ತುಆಧ್ಯಾತ್ಮಿಕ ಹಬ್ಬದ ಊಟವನ್ನು ಉಣ ಬಡಿಸಲಿದೆ ಎಂದರು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಯಿಂದ ಉದಯಿಸಿದ “ಕಂಟಾಟ” ಎಂಬ ಪದವು ಕೋರಸ್ ಅಥವಾ ಸಂಗೀತದೊಂದಿಗೆ ಕವಿತೆ ಅಥವಾ ಕಥೆಗೆ ಸಂಗೀತ ಸಂಯೋಜನೆ ಮಾಡುವುದು ಎಂದರ್ಥ. ಕ್ರಿಸ್ಮಸ್ ಕಂಟಾಟವು ಯೇಸು ಕ್ರೀಸ್ತರ ಜನನದ ಕಥೆಯನ್ನು ಹೇಳುತ್ತೆದೆ. ಈ ಚಾರಿತ್ರಿಕ ಘಟನೆಯನ್ನು ನೃತ್ಯರೂಪಕದ ಮೂಲಕ ಸಾದರಪಡಿಸುವುದೇ “ಕ್ರಿಸ್ಮಸ್ ಕ್ರಿಸ್ತೋತ್ಸವ” ಅಥವಾ“ಕ್ರಿಸ್ಮಸ್ ಕಂಟಾಟ.

60 ಕಲಾವಿದರ ಈ ತಂಡವು, ಕೆಲವು ಕೊರಿಯನ್ ಕಲಾವಿದರನ್ನು ಒಳಗೊಂಡಿದೆ. ಕನ್ನಡ ಭಾಷೆಯ ದ್ವನಿ ಮುದ್ರಿತ ಹಾಡುಗಳು ಮತ್ತು ಸಂಗೀತದಿಂದ ಸಮೃದ್ಧವಾದ ಈ ಪ್ರದರ್ಶನವು 60 ನಿಮಿಷಗಳ ಸಂಗೀತ ನಾಟಕವನ್ನು ಒಳಗೊಂಡಿದೆ. ಈ ಕಾರ್ಯಕ್ರಮ ದ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಹೋಲುತ್ತದೆ. ಇದು ಪಾಲ್ಗೊಳ್ಳುವ ಎಲ್ಲರಿಗೆ ಮರೆಯಲಾಗದ ಅನುಭವವನ್ನು ನೀಡಲಿದೆ .

ಭಾರತದಲ್ಲಿ 2014 ರಲ್ಲಿ ಆರಂಭವಾದ ಕಂಟಾಟವನ್ನು 30 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 1,700 ಸ್ಥಳಗಳಲ್ಲಿ ಪ್ರದರ್ಶನ ನೀಡಿದ, ಈ ತಂಡ, ಭಾರತದಾದ್ಯಂತ 6 ಲಕ್ಷ ಕಿಲೋ ಮೀಟರ್ ದೂರವನ್ನು ಕ್ರಮಿಸಿದೆ. ಕೊರಿಯಾ, ಯುಎಸ್ಎ ಮತ್ತು ಇತರ ದೇಶಗಳಲ್ಲಿ ಪ್ರದರ್ಶನಗಳ ಮೂಲಕ ಅಂತರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದ್ದಾರೆ ಎಂದರು

ಕಾರ್ಯಕ್ರಮವು ಸಂಜೆ 6ಗಂಟೆಗೆ ಆರಂಭವಾಗಲಿದ್ದು, ಸ್ಥಳೀಯ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಪರಿಸರ, ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುವ ನೃತ್ಯಗಳನ್ನು ಪ್ರದರ್ಶಿಸಲಿದ್ದರೆ ಹಾಗೂ ಕ್ರಿಸ್ಮಸ್ ಗೀತೆಗಳನ್ನು ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ ಬಿಷಪ್ ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಸಿ,ಎಸ್,ಐ., ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯ ಬಿಷಪ್ ಅತೀ ವಂದನೀಯ ಹೇಮಚಂದ್ರ ಕುಮಾರ್, ಬೆಂಗಳೂರಿನ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಥಿಯಾಲಜಿಯ ಪ್ರಾಚಾರ್ಯರಾದ ವಂದನೀಯ ಸೈಮನ್ ಅಬ್ರಾಹಾಂ ಭಾಗವಹಿಸಲಿದ್ದಾರೆ.

ಕೊರಿಯನ್ ತಂಡದಿಂದ ಪ್ರದರ್ಶನಗೊಳ್ಳುವ ನೃತ್ಯರೂಪಕ, ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಇದು ಉಡುಪಿಯ ಎಲ್ಲಾ ಕ್ರಿಶ್ಚಿಯನ್ ಸಭೆಗಳು ಜೊತೆಗೂಡಿ ಆಯೋಜಿಸುರುವ ಒಂದು ವಿಶಿಷ್ಠ ಕಾರ್ಯಕ್ರಮವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಯುನಾಯ್ಟೆಡ್ ಕ್ರಿಶ್ಚಿಯನ್ ಫೋರಂ ಉಡುಪಿ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಉಡುಪಿ ಶೋಕಮಾತಾ ಚರ್ಚಿನ ಪ್ರಧಾನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಬ್ರಹ್ಮಾವರ ಸೈಂಟ್ ಮೇರಿಸ್ ಸೀರಿಯನ್ ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ವಂ|ಮಥಾಯಿ, ಸಿಎಸ್ ಐ ಉಡುಪಿ ಪ್ರಾಂತ ಸಭಾ ಪಾಲಕ ವಂ|ಐವನ್ ಡಿ ಸೋನ್ಸ್, ವಂ|ಲಿಯೊ ಡಿಸೋಜಾ, ಪಾಸ್ಟರ್ ಕೆ ವಿ ಪೌಲ್, ಎಬನೇಜರ್ ಕ್ರಿಸ್ಟೋಫರ್ ಕರ್ಕಡ, ಮಂಜು ಗಿಡಿ ಹಾಗೂ ಇತರರು ಉಪಸ್ಥೀತರಿದ್ದರು.


Spread the love