ಡಿ. 18: ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದಿಂದ ರಕ್ತದಾನಿಗಳ ಸಂಪರ್ಕಕ್ಕೆ ‘ರೆಡ್ರಾಪ್’ ಆ್ಯಪ್ ಚಾಲನೆ
ಉಡುಪಿ: ಉಡುಪಿ ಜಿಲ್ಲೆಯ ಜನರಿಗೆ ಸಹಕಾರಿಯಾಗುವಂತೆ ರಕ್ತದಾನಿಗಳನ್ನು ಸಂಪರ್ಕಿಸಲು ಭಾರತೀಯ ಕೆಥೊಲಿಕ್ ಯುವ ಸಂಚಾಲನ (ಐಸಿವೈಎಂ) ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಅತ್ಯುನ್ನತ ಯೋಜನೆಯಾದ ರೆಡ್ರಾಪ್ ಎಂಬ ಆ್ಯಪ್ ನ ಅನಾವರಣ ಕಾರ್ಯಕ್ರಮ ಇದೇ ಡಿಸೆಂಬರ್ 18 ಸಂಜೆ 4.30 ಕ್ಕೆ ಉಡುಪಿ ಕಿದಿಯೂರು ಹೋಟೆಲಿನ ಶೇಷಶಯನ ಸಂಭಾಗಣದಲ್ಲಿ ಜರುಗಲಿದೆ.
ನೂತನ ಆ್ಯಪಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬ ನಿಂಬರಗಿ ಅವರ ಘನ ಉಪಸ್ಥಿತಿಯಲ್ಲಿ ಚಾಲನೆ ನೀಡಲಿದ್ದಾರೆ.
ಇವರೊಂದಿಗೆ ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಎ ಅಭಿನಂದನ್ ಶೆಟ್ಟಿ, ಲಯನ್ಸ್ ಜಿಲ್ಲೆ 317-ಸಿ ಇದರ ಗವರ್ನರ್ ಡಾ ತಲ್ಲೂರು ಶಿವರಾಮ್ ಶೆಟ್ಟಿ, ಜೆಸಿಐ ವಲಯ 15 ಇದರ ವಲಯಾಧ್ಯಕ್ಷ ಅಶೋಕ್ ಚಾಂತಾರು, ಕಿದಿಯೂರು ಹೋಟೆಲ್ ಇದರ ನಿರ್ದೇಶಕರಾದ ಜಿತೇಶ್ ಕಿದಿಯೂರು, ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಆರೋಜಾ, ಆರೋಗ್ಯ ಅಯೋಗದ ಡಾ|ಎಡ್ವರ್ಡ್ ಲೋಬೊ, ಧರ್ಮಪ್ರಾಂತ್ಯದ ಪಾಲನ ಸಮಿತಿಯ ಕಾರ್ಯದರ್ಶಿ ಅಲ್ಫೋನ್ಸ್ ಡಿಕೋಸ್ತಾ, ಕೆಥೊಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಜೆನೆಟ್ ಬಾರ್ಬೋಜಾ, ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯ ನಿರ್ದೇಶಕ ವಂ|ಎಡ್ವಿನ್ ಡಿಸೋಜಾ, ಅಧ್ಯಕ್ಷರಾದ ಡಿಯೋನ್ ಡಿಸೋಜಾ, ಕಾರ್ಯದರ್ಶಿ ಸಾರಾ ಡಿಸೋಜಾ ಉಪಸ್ಥಿತರಿರುವರು.
ರೆಡ್ರಾಪ್ ಮೂಲಕ ರಕ್ತದ ಕೊರತೆ ಇರುವವರು, ಉದಾರ ರಕ್ತ ದಾನಿಗಳಿಂದ ಯಾವುದೇ ವಿಳಂಬ ಇಲ್ಲದೆ ರಕ್ತ ಪಡೆಯಲು ಸಹಕಾರಿಯಾಗಲಿದೆ. ಪ್ರಮುಖವಾಗಿ ಇಲ್ಲಿ ಮಧ್ಯವರ್ತಿಗಳ ಅವಶ್ಯಕತೆ ಇರುವುದಿಲ್ಲ. ರೆಡ್ರಾಫ್ ಮುಖಾಂತರ ರಕ್ತ ದಾನಿಗಳಿಗೂ ಹಾಗೂ ಸ್ವೀಕರಿಸುವವರಿಗೂ ಹಲವು ಅನುಕೂಲತೆ ಒದಗಿಸಲಾಗುತ್ತದೆ. ಇಲ್ಲಿ ಜನರು ರಕ್ತ ದಾನಿಗಳಾಗಿ ತಮ್ಮನ್ನು ತಾವೇ ಪಟ್ಟಿ ಮಾಡಬಹುದಾಗಿದೆ. ಸ್ವೀಕರಿಸುವವರು ತಮ್ಮ ಲಭ್ಯತೆ ಪರಿಶೀಲಿಸಬಹುದು. ಅಗತ್ಯ ಇರುವವರು ರಕ್ತದ ಅವಶ್ಯಕತೆಗಳನ್ನು ಪೋಸ್ಟ್ ಮಾಡಿದರೆ ದಾನಿಗಳನ್ನು ತಕ್ಷಣವೆ ಸೂಚಿಸಲಾಗುತ್ತದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.