ಡಿ.24 ಕ್ಕೆ ವಕ್ವಾಡಿ ಗುರುಕುಲದಲ್ಲಿ ಅಪ್ಪಣ್ಣ ಹೆಗ್ಡೆ-90 ಕಾರ್ಯಕ್ರಮ: ಡಾ. ಎಮ್ ಮೋಹನ್ ಆಳ್ವ ಮಾಹಿತಿ

Spread the love

ಡಿ.24 ಕ್ಕೆ ವಕ್ವಾಡಿ ಗುರುಕುಲದಲ್ಲಿ ಅಪ್ಪಣ್ಣ ಹೆಗ್ಡೆ-90 ಕಾರ್ಯಕ್ರಮ: ಡಾ. ಎಮ್ ಮೋಹನ್ ಆಳ್ವ ಮಾಹಿತಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆ ಉಪಸ್ಥಿತಿ

ಕಾರ್ಯಕ್ರಮಕ್ಕೆ ಅಂದಾಜು 10,000 ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ

 
ಕುಂದಾಪುರ: ನಾಡಿನ ಹಿರಿಯ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ಡಿ.24 ರಂದು 90 ವರ್ಷ ತುಂಬುತ್ತಿರುವ ಕಾರಣದಿಂದ ಈ ಬಾರಿಯ ಅವರ ಹುಟ್ಟು ಹಬ್ಬವನ್ನು ಸಾರ್ವಜನಿಕ ಭಾಗೀದಾರಿಕೆಯೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಚಿಂತನೆಯಲ್ಲಿ ಆಲೋಚನೆಗಳ ಚುಕ್ಕಿಗಳನ್ನು ರಂಗೋಲಿಯನ್ನಾಗಿಸುವ ಸತ್ಕಾರ್ಯಕ್ಕೆ ಮುಂದಡಿ ಇಟ್ಟಿದ್ದೇವೆ ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಹೇಳಿದರು.

ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ ಅಪ್ಪಣ್ಣ ಹೆಗ್ಡೆ 90 ರ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಲವು ದಶಕಗಳ ಸಾಮಾಜಿಕ ಕ್ಷೇತ್ರದ ಸಕ್ರೀಯ ಸೇವೆಯಲ್ಲಿ ಯಾವುದೇ ಸ್ವಾರ್ಥ ಪರ ಚಿಂತನೆ ಮಾಡದ, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅಜಾತಶತ್ರು ಬಿ.ಅಪ್ಪಣ್ಣ ಹೆಗ್ಡೆ ಅವರ 90 ರ ಹುಟ್ಟು ಹಬ್ಬವನ್ನು ಸಂಭ್ರಮವನ್ನಾಗಿಸುವ ಕಲ್ಪನೆಯೊಂದಿಗೆ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಈ ಕಾರ್ಯಕ್ರಮ ಹಿಂದಿನ ಯಾವುದೇ ಕಾರ್ಯಕ್ರಮಗಳಂತಾಗದೆ ವಿಭಿನ್ನವಾಗಿ ಮೂಡಿ ಬಂದು ದಾಖಲೆಯಾಗಿ ಉಳಿಯಬೇಕು ಎನ್ನುವ ಸದುದ್ದೇಶದಿಂದ ಈಗಾಗಲೇ ಸಾಕಷ್ಟು ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು, ಬೈಂದೂರು, ಬ್ರಹ್ಮಾವರ, ಮುಂಬೈ ಸೇರಿದಂತೆ ಹಲವು ಕಡೆ ಪೂರ್ವಭಾವಿ ಸಭೆಗಳನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದರು.

ಹುಟ್ಟು ಹಬ್ಬದ ಆಚರಣೆ ಕೇವಲ ಒಂದು ದಿನಕ್ಕೆ ಮುಗಿಯಬಾರದು ಎನ್ನುವ ನೆಲೆಯಲ್ಲಿ ಅಪ್ಪಣ್ಣ ಹೆಗ್ಡೆಯವರಿಗೆ ಆಸಕ್ತಿ ಇರುವ‌ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸಬೇಕು ಎನ್ನುವ ಉದ್ದೇಶವನ್ನು ಇರಿಸಿಕೊಂಡು ಬೈಂದೂರಿನ ಕುಡೂರಿನಲ್ಲಿ ಎಲ್ಲೂರು ಕಂಬಳ ಹಾಗೂ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಮೂಡುಬಿದಿರೆ ಆಳ್ವಾಸ್ ಸಾಂಸ್ಕೃತಿಕ ಲೋಕ -2024 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ, ದೇವವೃಕ್ಷ ಅಭಿಯಾನ, ಗ್ರಾಮೀಣ ಪ್ರದೇಶದಲ್ಲಿ ರಂಗ ಮಂಟಪ ನಿರ್ಮಾಣ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.

ಡಿ.24 ರಂದು ಸಂಜೆ 4 ರಿಂದ ವಕ್ವಾಡಿಯ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಬಯಲು ಆವರಣದಲ್ಲಿ ಬಿ.ಅಪ್ಪಣ್ಣ ಹೆಗ್ಡೆ ಅವರ 90 ರ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಸಂಜೆ 4 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಜರ್ನಿ ಥೇಟರ್ ತಂಡದವರಿಂದ ‘ಬೇಲಿ ಮುಳ್ಳಿನ ನೀಲಿ ಹೂಗಳು’ ರಂಗ ಗೀತೆ ಹಾಗೂ ಜಾನಪದ ಗೀತೆಗಳು ಪ್ರಸ್ತುತಿ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಗುರುಕುಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ‘ನೃತ್ಯ ಸಂಗಮ’ ಹಾಗೂ ರಾತ್ರಿ ಬಿಡುವನೆ ಬ್ರಹ್ಮಲಿಂಗ ಖ್ಯಾತಿಯ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರುಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕೆ ನೃತ್ಯಗಾಥೆ ಹಾಗೂ ನೃತ್ಯಗಳನ್ನು ಒಳಗೊಂಡಿರುವ ಸಾಂಸ್ಕೃತಿಕ ರಸೋಲ್ಲಾಸ ನಡೆಯಲಿದೆ ಎಂದರು.

ಸಂಜೆ 6.30 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೆಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ. ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅವರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಸಾಧಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೀಡುವ ದತ್ತಿ ನಿಧಿ ವಿತರಣೆ ನಡೆಯಲಿದೆ.

ಪ್ರಧಾನ ವೇದಿಕೆಯಲ್ಲಿ ಯಾವುದೇ ಸಾರ್ವಜನಿಕ ಸನ್ಮಾನ, ಶುಭಾಶಯಗಳ ಅರ್ಪಣೆ ಹಾಗೂ ಅಭಿನಂದನ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಸಭಾ ಕಾರ್ಯಕ್ರಮ ಮುಗಿದ ಬಳಿಕ ಉಪ ವೇದಿಕೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗುವುದು. ರಾತ್ರಿಯ ಚಂದ್ರನ ಹೊನಲು ಬೆಳಕಿನಲ್ಲಿ ಆಮಂತ್ರಿತರೊಂದಿಗೆ ಸಹ ಭೋಜನ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಂದಾಜು 10,000 ಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.

ಗುರುಕುಲ ಪಬ್ಲಿಕ್ ಸ್ಕೂಲ್ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸಾಂಸ್ಕೃತಿಕ ಸಂಯೋಜಕ ಉದಯ್ ಪಡುಕರೆ ಇದ್ದರು. ಜನ್ಮದಿನೊತ್ಸವ ಸಮಿತಿಯ ವಸಂತ ಗಿಳಿಯಾರ್ ಸ್ವಾಗತಿಸಿದರು.


Spread the love