ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ : ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

Spread the love

ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ : ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ

ಉಡುಪಿ: ಡೆಂಗ್ಯೂ ಅತ್ಯಂತ ದೊಡ್ಡ ರೋಗವೇನಲ್ಲ. ಆದರೆ ಡೆಂಗ್ಯೂನ ಬಗ್ಗೆ ನಿರ್ಲಕ್ಷ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ನಮ್ಮ ಮನೆಯ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಸೊಳ್ಳೆಗಳ ಮೇಲೆ ವಿಶೇಷ ನಿಗಾ ವಹಿಸಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಕೆ. ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಉದ್ಯಾವರ ಗ್ರಾಮ ಪಂಚಾಯತ್ ಮತ್ತು ಇತರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನಡೆದ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಪಿ ಜಿಲ್ಲಾಧಿಕಾರಿ ಮಾತನಾಡಿದರು.

ಬೆಳಗ್ಗಿನ ಅವಧಿಯಲ್ಲಿ ಕಚ್ಚುವಂತಹ ಈ ಸೊಳ್ಳೆಗಳ ಮೂಲಕ ಡೆಂಗ್ಯೂ ಜ್ವರ ಹರಡುತ್ತಿದೆ. ಮನೆ ಪರಿಸರದಲ್ಲಿ ಚಿಪ್ಪು, ಚಹಾಲೋಟ ಸಹಿತ ವಿವಿಧ ಸ್ಥಳಗಳಲ್ಲಿ ನೀರು ನಿಂತರೆ ಇಂಥ ಸಮಸ್ಯೆಗಳು ಉದ್ಭವಿಸುತ್ತದೆ. ಮನೆ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ಬಯಸುವುದು ಅತ್ಯಗತ್ಯ. ಕಹಿಬೇವಿನ ಎಣ್ಣೆ ಹಚ್ಚುವುದರ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬಹುದು. ರಾಜ್ಯ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮೂಲಕ ವಿವಿಧ ಕಡೆಗಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಶುಕ್ರವಾರ ಇಲಾಖಾ ವತಿಯಿಂದ ಡ್ರೈ ಆಚರಿಸಲಾಗುತ್ತಿದ್ದು, ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವೊಂದು ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಮತ್ತು ಜಾಗೃತಿ ನೀಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಈಶ್ವರ್ ಗಡದ, ಜಿಲ್ಲಾ ರೋಗವಾಹಕ ಆಶ್ರುತ ರೋಗಗಳ ನಿರ್ವಹಣಾಧಿಕಾರಿ ಡಾ. ಪ್ರಶಾಂತ್ ಭಟ್, ಉಡುಪಿ ತಾಲೂಕು ತಹಶೀಲ್ದಾರ್ ಗುರುರಾಜ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಪಿಡಿಒ ರಮೇಶ್, ಪಶುವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ, ಉಡುಪಿ ಜಿಲ್ಲಾ ಕೀಟಶಾಸ್ತ್ರಜ್ಞ ಮುಕ್ತ ಆಚಾರ್, ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಮೂಡಬೆಟ್ಟು ಆರೋಗ್ಯಧಿಕಾರಿ ಡಾ. ಶೈನಿ, ಹರಿಪ್ರಸಾದ್ ರೈ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿದರೆ, ಜೀವನ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.


Spread the love