Home Mangalorean News Kannada News ಡೊಲ್ಲಾ ಮಂಗಳೂರು ಇವರಿಗೆ 14 ನೇ ಕಲಾಕಾರ್ ಪುರಸ್ಕಾರ ಘೋಷಣೆ

ಡೊಲ್ಲಾ ಮಂಗಳೂರು ಇವರಿಗೆ 14 ನೇ ಕಲಾಕಾರ್ ಪುರಸ್ಕಾರ ಘೋಷಣೆ

Spread the love

ಡೊಲ್ಲಾ ಮಂಗಳೂರು ಇವರಿಗೆ 14 ನೇ ಕಲಾಕಾರ್ ಪುರಸ್ಕಾರ ಘೋಷಣೆ

ಮಂಗಳೂರು : ಕೊಂಕಣಿ ರಂಗಭೂಮಿಗೆ ಆರು ದಶಕಗಳ ಮಹತ್ವದ ಯೋಗದಾನ ನೀಡಿದ ಪ್ರಸಿದ್ಧ ನಿರ್ದೇಶಕ, ನಾಟಕಗಾರ ಹಾಗೂ ಹಾಸ್ಯ ಕಲಾವಿದ ಆವಿತಾಸ್ ಎಡೊಲ್ಫಸ್ ಕುಟಿನ್ಹಾ (ಡೊಲ್ಲಾ ಮಂಗಳೂರು) ಇವರಿಗೆ ಮಾಂಡ್ ಸೊಭಾಣ್-ಕಾರ್ವಾಲ್ ಘರಾಣೆ ಇವರು ಜಂಟಿಯಾಗಿ ನೀಡುವ ಕಲಾಕಾರ್ ಪುರಸ್ಕಾರ ಲಭಿಸಿದೆ. ಈ ಪುರಸ್ಕಾರವು ಶಾಲು, ಫಲ-ಪುಷ್ಪ, ಸನ್ಮಾನಪತ್ರ, ಸ್ಮರಣಿಕೆ ಹಾಗೂ ರೂ 25,000/- ನಗದು ಒಳಗೊಂಡಿದೆ.

ನವೆಂಬರ್ 04, ಭಾನುವಾರ ಸಾಯಂಕಾಲ 06.00 ಗಂಟೆಗೆ ಕಲಾಂಗಣದಲ್ಲಿ ನಡೆಯುವ 203 ನೇ ತಿಂಗಳ ವೇದಿಕೆ ಕಾರ್ಯಕ್ರಮದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಸಂತ ಎಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ವಂ. ಪ್ರವೀಣ್ ಮಾರ್ಟಿಸ್ ಇವರು ಮುಖ್ಯ ಅತಿಥಿಗಳಾಗಿ ಈ ಪುರಸ್ಕಾರವನ್ನು ಹಸ್ತಾಂತರಿಸಲಿರುವರು.

ತನ್ನ ಎಳವೆಯಲ್ಲೇ ರಂಗಮಂಚವನ್ನೇರಿದ ಡೊಲ್ಲಾ ಅವರು ಹಲವಾರು ಕೊಂಕಣಿ ಹಾಗೂ ತುಳು ನಾಟಕಗಳನ್ನು ಬರೆದು, ನಿರ್ದೇಶಿಸಿ, ನಟಿಸಿದ್ದಾರೆ. ಡೊಲ್-ಫೆಲ್-ಚಲ್ ಎಂಬ ಹಾಸ್ಯ ತಂಡವನ್ನು ಕಟ್ಟಿ ವಿಲ್ಫಿ ನಾಯ್ಟ್ ಕಾರ್ಯಕ್ರಮಗಳಲ್ಲಿ ಜನರನ್ನು ನಗಿಸಿದ್ದಾರೆ. ಪ್ರೊಫೆಸರ್ ಸೈತಾನ್ ಎಂಬ ನಾಮಾಂಕಿತದಲ್ಲಿ ಜಾದೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಡೊಲ್-ಫೆಲ್-ಚಲ್, ಫೊಕಣಾಂ ಫೊಕಣಾಂ-2000 ಮತ್ತು ಹಿಪ್ ಹಿಪ್ ಹುರ್ರೇ ಎಂಬ ಧ್ವನಿಸುರುಳಿಗಳನ್ನು ಹಾಗೂ ಹಿಪ್ ಹಿಪ್ ಹುರ್ರೇ, ಕುಚ್ ಕುಚ್ ಕುಚಿಲ್ಯೊ ಮತ್ತು ಹಾಸ್ ಹಾಸ್ ಹಾಸ್ಕುಳೆ ಹಾಸ್ಯ ಪುಸ್ತಕಗಳನ್ನು ಹೊರ ತಂದಿದ್ದಾರೆ. ಕೊಂಕಣಿ ಹಾಗೂ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಸಮಾಜಿಕ ಹಾಗೂ ಧಾರ್ಮಿಕ ನಾಟಕಗಳಿಗೆ ನಿರ್ದೇಶನ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹಾಗೂ ಮೈಸೂರು, ಬೆಂಗಳೂರು, ಮುಂಬಯಿ, ದುಬಾಯ್, ಅಬುಧಾಬಿ, ಮಸ್ಕತ್, ಬಹರೇಯ್ನ್, ಖತಾರ್ ಹಾಗೂ ಕುವೇಯ್ಟ್ ದೇಶಗಳಲ್ಲಿ ಹಾಸ್ಯ ಪ್ರದರ್ಶನ ನೀಡಿದ್ದಾರೆ.

ಅವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಲಾ ಗೌರವ ಪ್ರಶಸ್ತಿ, ಕೊಂಕಣಿ ಕುಟಮ್ ಪ್ರಶಸ್ತಿ, ಕರಾವಳ್ ಕೊಂಕಣ್ ಕಲಾ ಪ್ರಶಸ್ತಿಯೊಡನೆ ಇನ್ನಿತರ ಪ್ರಶಸ್ತಿಗಳು ಲಭಿಸಿವೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ.
ಕೊಂಕಣಿ ಪ್ರದರ್ಶನ ಕಲೆಯ ವಿವಿಧ ಪ್ರಕಾರಗಳ ಕಲಾವಿದರನ್ನು ಗೌರವಿಸಲು 2005 ರಲ್ಲಿ ಗೋವಾದ ಭಾಷಾ ತಜ್ಞ ಡಾ. ಪ್ರತಾಪ್ ನಾಯ್ಕ್ ಇವರು ತನ್ನ `ಕಾರ್ವಾಲ್ ಘರಾಣೆಂ’ ಕುಟುಂಬಿಕರ ಪರವಾಗಿ ಹಾಗೂ ಮಾಂಡ್ ಸೊಭಾಣ್ ಸಂಸ್ಥೆಯ ಆಶ್ರಯದಲ್ಲಿ ಈ ಪುರಸ್ಕಾರ ಸ್ಥಾಪಿಸಿದ್ದರು.

ಈವರೆಗೆ ಅರುಣ್ರಾಜ್ ರೊಡ್ರಿಗಸ್ (ನಾಟಕ), ಜೊಯೆಲ್ ಪಿರೇರಾ (ಸಂಗೀತ), ಹ್ಯಾರಿ ಡಿಸೊಜಾ (ಬ್ರಾಸ್ಬ್ಯಾಂಡ್), ವಂ. ಚಾರ್ಲ್ಸ್ ವಾಸ್ (ಭಕ್ತಿ ಸಂಗೀತ), ಅನುರಾಧಾ ಧಾರೇಶ್ವರ್ (ಸಂಗೀತ), ಸಂತ ಭದ್ರಗಿರಿ ಅಚ್ಯುತದಾಸ್ (ಹರಿಕಥೆ), ಜೇಮ್ಸ್ ಲೊಪಿಸ್, ಹೊನ್ನಾವರ (ಬ್ರಾಸ್ಬ್ಯಾಂಡ್), ನೊರ್ಬರ್ಟ್ ಗೊನ್ಸಾಲ್ವಿಸ್ (ಸಂಗೀತ), ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ (ನಾಟಕ, ರೋಶನ್ ಡಿಸೋಜ (ಸಂಗೀತ), ಕ್ರಿಸ್ಟೋಫರ್ ಡಿಸೋಜ (ನಾಟಕ), ಆವಿಲ್ ಡಿಕ್ರೂಜ್ (ನೃತ್ಯ) ಎಂ. ಗೋಪಾಲ ಗೌಡ (ಜಾನಪದ) ಇವರಿಗೆ ಈ ಪುರಸ್ಕಾರ ನೀಡಲಾಗಿದೆ.


Spread the love

Exit mobile version