ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡ ಹದಿಹರೆಯದ ಯುವಕನಿಗೆ ನೆರವಾಗುವಿರಾ?
– ಆಶಿಕ್ ಕುಕ್ಕಾಜೆ
ಬಂಟ್ವಾಳ: ಬಂಟ್ವಾಳ ತಾಲೂಕು, ಸಜಿಪಮೂಡ ಗ್ರಾಮದ ಬೊಳ್ಳಾಯಿ ಜಾಡಕೋಡಿ ಎಂಬಲ್ಲಿ ವಾಸವಾಗಿರುವ ಪಿ.ಬಿ.ಮೊಹಮ್ಮದ್ ಹಾಗೂ ಮೈಮುನಾ ದಂಪತಿಗಳ ಪುತ್ರ 19 ವರ್ಷ ಪ್ರಾಯದ ಹಂಝ ನಮ್ಮಂತೆಯೇ ದುಡಿದು ತನ್ನ ಕುಟುಂಬವನ್ನು ಸಾಕಬೇಕಾಗಿದ್ದ ಯುವಕ. ಆದರೆ ತಾನು ಆರು ತಿಂಗಳ ಮಗುವಾಗಿರುವಾಗಲೇ ಮೂತ್ರ ಕೋಶದ ಸಮಸ್ಯೆಯಿಂದಾಗಿ ಮೂತ್ರ ಬ್ಲಾಕ್ ಆಗಿ ಸರ್ಜರಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಯಿತು. ಸಣ್ಣ ಮಗುವಾಗಿರುವಾಗಲೇ ಟ್ಯೂಬ್ ಮೂಲಕ ಮೂತ್ರ ಮಾಡುವಂತಹ ಸರ್ಜರಿಗೆ ಒಳಗಾದ ಹಂಝ, ಅಂದಿನಿಂದ ಇಂದಿನವರೆಗೂ ಟ್ಯೂಬ್ ಮೂಲಕವೇ ಮೂತ್ರ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದಾನೆ. ಕೃತಕವಾಗಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದ ಹಂಝನಿಗೆ 2014 ರಲ್ಲಿ ಪ್ರಥಮ ಬಾರಿಗೆ ಕಿಡ್ನಿ ಸಮಸ್ಯೆ ಉಂಟಾಯಿತು. ಅಂದಿನಿಂದ ಪ್ರತೀ ತಿಂಗಳಿಗೊಮ್ಮೆ ಚಿಕಿತ್ಸೆಗಾಗಿ ಹಂಝನನ್ನು ಆಸ್ಪತ್ರೆಗೆ ಕರೆದೊಯ್ಯ ಬೇಕಾಗಿತ್ತು. ಒಮ್ಮೆ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿ ಬರುವಾಗ ಬಡಪಾಯಿ ತಂದೆ ದುಡಿದ ಹಣವೆಲ್ಲವೂ ಅದಕ್ಕೇ ಸರಿಯಾಗುತ್ತಿತ್ತು. ಆರ್ಥಿಕವಾಗಿ ತೀರಾ ಹಿಂದುಳಿದ ಆತನ ತಂದೆಗೆ ತಾನು ದಿನಂಪ್ರತೀ ಮೈಮುರಿದು ದುಡಿದರೂ ಮಗನ ಚಿಕಿತ್ಸೆಗೆ ಹಣ ಹೊಂದಿಸಲಾಗದ ಪರಿಸ್ಥಿತಿ.
ಹಂಝನ ತಂದೆ ಮೊಹಮ್ಮದ್ ಅವರು ಸಜಿಪಮೂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಕೆಲಸದಲ್ಲಿದ್ದು, ಅದರಿಂದ ಬರುವ ಸಂಬಳದಲ್ಲಿ ಮನೆಯ ಖರ್ಚಿಗೇ ಸರಿ ಹೊಂದುತ್ತಿರಲಿಲ್ಲ ಅದರೆಡೆಯಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ. ಅದಲ್ಲದೆ ಅರ್ಧ ದಿನ ಆಸ್ಪತ್ರೆಯಲ್ಲಾದರೆ ಅರ್ಧ ದಿನ ಕೆಲಸದಲ್ಲಿ ತೊಡಗಿರುವ ತಂದೆಯ ಸ್ಥಿತಿ ನೋಡುವಾಗ ಮನಸ್ಸು ಮತ್ತಷ್ಟು ಭಾರವಾಗುತ್ತದೆ. ಇದೆಲ್ಲದರ ನಡುವೆ ತಾನೇನು ಮಾಡಬೇಕೆಂದು ತಿಳಿಯದೆ ದಿಕ್ಕೇ ತೋಚದಂತಾಗಿದ್ದಾರೆ ಬಡಪಾಯಿ ಮೊಹಮ್ಮದ್.
ಅತ್ತ ಮಗನ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಇತ್ತ ಯಾರ ನೆರವೂ ಸಿಗದೇ ರೋಗ ಉಲ್ಬಣಿಸಿ ಒಂದು ಕಿಡ್ನಿ ಕಳೆದುಕೊಂಡಿದ್ದ ಹಂಝ ಇದೀಗ ತನ್ನ ಎರಡೂ ಕಿಡ್ನಿಯನ್ನೂ ಕಳೆದುಕೊಂಡಿದ್ದಾನೆ. ಇದೀಗ 19ರ ಹರೆಯದ ಈ ಯುವಕ ಎಷ್ಟು ನೋವು ಅನುಭವಿಸುತ್ತಿದ್ದಾನೆ ಎಂದರೆ ನಾನು ಆಸ್ಪತ್ರೆಗೆ ಹೋಗಿ ಆತನನ್ನು ಮೆತ್ತಗೆ ಮುಟ್ಟಿ ಮಾತನಾಡಿಸಿದಾಗ ಬೊಬ್ಬೆ ಹಾಕಿ ಕಿರುಚಾಡಿದ. ಇಷ್ಟು ವರ್ಷ ಹಂಝ ಎಷ್ಟು ನೋವು ಅನುಭವಿಸಿದ್ದಾನೋ ಆ ಸೃಷ್ಟಿಕರ್ತನೇ ಬಲ್ಲವನು.
ಒಂದೆಡೆ ತನ್ನ ದುಡಿಮೆಯಿಂದ ಬರುವ ವರಮಾನದಿಂದ ಅತ್ತ ಕುಟುಂಬವನ್ನು ಸಾಕಬೇಕಾದ ಪರಿಸ್ಥಿತಿ ಇನ್ನೊಂದೆಡೆ ತನ್ನ ಮಗನ ಚಿಕಿತ್ಸೆಯ ಹೊರೆಯನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯತೆಯ ನಡುವೆ ಇಂದು ಅಸಹಾಯಕರಾಗಿ ಕುಳಿತಿದ್ದಾರೆ ಮೊಹಮ್ಮದ್. ಇದೀಗ ಹಂಝನ ಭವಿಷ್ಯವು ನಮ್ಮೆಲ್ಲರ ಕೈಯಲ್ಲಿದೆ. ಶೀಘ್ರ ಗುಣಮುಖನಾಗಿ ಕುಟುಂಬಕ್ಕೆ ಆಸರೆಯಾಬೇಕಾದ ಹಂಝನ ಕುಟುಂಬವು ಉದಾರ ದಾನಿಗಳ ಮೊರೆ ಹೋಗಿದೆ. ಆದ್ದರಿಂದ ಉದಾರ ದಾನಿಗಳೆಲ್ಲರೂ ಈ ಬಡ ಯುವಕನ ಚಿಕಿತ್ಸೆಗೆ ತಮ್ಮ ಕೈಯಲ್ಲಾಗುವ ಧನ ಸಹಾಯ ಮಾಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.ತಾವು ನೀಡುವ ಪ್ರತೀ ರೂಪಾಯಿಯು ಈ ಯುವಕನ ಜೀವವನ್ನು ರಕ್ಷಿಸಬಲ್ಲದು.
ಹಂಝರವರ ಚಿಕಿತ್ಸೆಯು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಡೆಯುತ್ತಿದೆ.
ದಾನಿಗಳು ರೋಗಿ ಹಂಝನ ತಂದೆಯವರಾದ ಮೊಹಮ್ಮದ್ ಅವರನ್ನು 9611004451 ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದ್ದು, ಅವರ ಬ್ಯಾಂಕ್ ವಿವರಗಳು ಈ ಕೆಳಗಿನಂತಿದೆ.