ತನ್ನ ಸೂರನ್ನು ಮರಳಿ ಪಡೆದ ಬ್ರಹ್ಮಾವರದ ಹಿರಿಯ ನಾಗರಿಕ ಲಾರೆನ್ಸ್ ಡಿಸೋಜ!
ಉಡುಪಿ: ಬ್ರಹ್ಮಾವರದ ಬೈಕಾಡಿಯ ನಿವಾಸಿ 80 ವರ್ಷದ ಹಿರಿಯ ನಾಗರಿಕ ಲಾರೆನ್ಸ್ ಡಿಸೋಜರು ತನ್ನ ಮಗಳ ಹೆಸರಿಗೆ ಬರೆಯಿಸಿದ್ದ ಮನೆಯ ದಾನ ಪತ್ರವನ್ನು ಅಸಿಂಧು ಎಂದು ಘೋಷಿಸಿದ ಕುಂದಾಪುರದ ಹಿರಿಯ ನಾಗರೀಕರ ನ್ಯಾಯ ಮಂಡಳಿಯು ಪಂಚಾಯತ್ ದಾಖಲೆಗಳಲ್ಲಿ ಮನೆಯನ್ನು ಡಿಸೋಜರವರ ಹೆಸರಲ್ಲಿ ಮರುಸ್ಥಾಪಿಸಲು ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಉಪನೋಂದಣಾಧಿಕಾರಿಯವರಿಗೆ ನಿರ್ದೇಶಿಸಿದೆ. ಈ ಪ್ರಕರಣದ ದಾವೆಹೂಡುವಲ್ಲಿ ಪ್ರಾರಂಭದಿಂದಲೇ ಮಾರ್ಗದರ್ಶನ ಹಾಗೂ ಕಾನೂನು ನೆರವನ್ನು ನೀಡಿದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ಡಿಸೋಜ ದಂಪತಿಗಳಿಗೆ ಸಂಪೂರ್ಣ ನ್ಯಾಯ ಸಿಗುವವರೆಗೂ ಮಾರ್ಗದರ್ಶನವನ್ನು ನೀಡಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ|ರವೀಂದ್ರನಾಥ್ ಶಾನುಭಾಗ್ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿ ಬಡತನದಲ್ಲೇ ಬೆಳೆದ ಲಾರೆನ್ಸ್ ಡಿಸೋಜರು ಕಳೆದ 5 ದಶಕಗಳಿಂದ ಲಾರಿ ಮತು ಬಸ್ ಡೈವರಾಗಿ ಕೆಲಸಮಾಡುತ್ತಿದ್ದರು. ಸ್ವತಃ ತಾನು ಅವಿದ್ಯಾವಂತನಾಗಿದ್ದರೂ, ತನ್ನ ನಾಲ್ಕು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ನೀಡಿದ್ದರು. ಪ್ರಸ್ತುತಮಕ್ಕಳೆಲ್ಲರೂ ಮದುವೆಯಾಗಿ ಅವರವರ ಸಂಸಾರಗಳೊಂದಿಗೆ ವಾಸವಾಗಿದ್ದಾರೆ. ಡಿಸೋಜರಿಗೆ 1997ರಲ್ಲಿ ಕರ್ನಾಟಕ ಸರಕಾರದವತಿಯಿಂದ ಬ್ರಹ್ಮಾವರದ ಬೈಕಾಡಿಯಲ್ಲಿ ಮನೆ ನಿವೇಶನ ಮಂಜೂರಾಗಿದ್ದು ಅದರಲ್ಲಿ ಪುಟ್ಟ ಹಂಚಿನ ಮನೆಯೊಂದನ್ನು ನಿರ್ಮಿಸಿದ್ದರು. ಅಂದಿನಿಂದ ತನ್ನ ಪತ್ನಿ ಮೋಂತಿನ್ ಡಿಸೋಜಾಳೊಂದಿಗೆ ವಾಸವಾಗಿದ್ದಾರೆ.
2021ನೇ ಇಸವಿಯಲ್ಲಿ ಮೋಂತಿನ್ ಡಿಸೋಜಾರವರಿಗೆ ವಯೋಸಹಜವಾದ ಕಾಯಿಲೆಯಿಂದಾಗಿ ಹಾಸಿಗೆ ಹಿಡಿದಾಗ ಅವರ ಎರಡನೇ ಮಗಳು ಪ್ರೆಸಿಲ್ಲಾಳು ಅವರ ಆರೈಕೆಗಾಗಿ ಬಂದಿದ್ದಳು. ಆನಂತರದ ಅವಧಿಯಲ್ಲಿ ಹೆತ್ತವರೊಂದಿಗೆ ಪ್ರೀತಿಯಿಂದ ಒಡನಾಟವನ್ನು ಮಾಡುತ್ತಿದ್ದಳು, ಬೈಕಾಡಿಯಲ್ಲಿರುವ ಡಿಸೋಜರ ಮನೆ ಹಾಗು ಜಮೀನನ್ನು ತನ್ನ ಹೆಸರಿಗೆ ಬರೆಯುವಂತೇ ಆಗಾಗ ಹೆತ್ತವರನ್ನು ಒತ್ತಾಯಿಸುತ್ತಿದ್ದಳು. ಆದರೆ ಹೆತ್ತವರು ಇದಕ್ಕೆ ಸಮ್ಮತಿಸಿರಲಿಲ್ಲ.
ಕೆಲ ಸಮಯದಲ್ಲಿಯೇ ಲಾರೆನ್ಸ್ ಡಿಸೋಜರಿಗೆ ಹೃದಯಾಘಾತವಾಯಿತು. ಆಗಲೂ ಮಗಳಾದ ಪ್ರಸಿಲ್ಲಾಳು ಆರೈಕೆಮಾಡಿಕೊಂಡಿದ್ದಳು. 2023ರಲ್ಲಿ ಡಿಸೋಜರು ಪುನಃ ಅನಾರೋಗ್ಯಕ್ಕೆ ಒಳಗಾದಾಗ ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರನ್ನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಕಷ್ಟದ ದಿನಗಳಲ್ಲಿ ಹೆತ್ತವರನ್ನು ನೋಡಿಕೊಳ್ಳಬೇಕಾದಲ್ಲಿ ಪ್ರಸಿಲ್ಲಾಳು ಡಿಸೋಜರ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸಿ ಎಂದು ಬಲವಂತ ಮಾಡಲು ಪ್ರಾರಂಭಿಸಿದಳು.
ಆಗ ಒತ್ತಡಕ್ಕೊಳಗಾದ ಡಿಸೋಜರು ತನ್ನ ಮನೆಯನ್ನು ದಾನಪತ್ರದ ಮೂಲಕ ನೀಡುವ ಬದಲು ಆಕೆಯ ಹೆಸರಿಗೆ ವೀಲುನಾಮೆ ಮಾಡಲು ಒಪ್ಪಿದರು. ಏಕೆಂದರೆ, ಮನೆ ನಿವೇಶನ ಪಡೆದ ಹಕ್ಕುಪತ್ರದಲ್ಲಿ ಸರಕಾರ ನೀಡಿದ ಸ್ಥಿರಾಸ್ತಿಯನ್ನು 25 ವರ್ಷಗಳವರೆಗೂ ಯಾರಿಗೂ ಪರಭಾರೆ ಮಾಡುವಂತಿಲ್ಲ ಎಂಬ ನಿಯಮವಿತ್ತು. ಈ ಸಂದರ್ಭದಲ್ಲಿ ತನ್ನ ಪತ್ನಿಯೊಂದಿಗೆ ಚರ್ಚಿಸಿದ ಡಿಸೋಜರು “ನಾವು ಜೀವಂತವಿರುವ ತನಕ ನಮ್ಮಿಬ್ಬರನ್ನು ಚೆನ್ನಾಗಿ ನೋಡಿಕೊಂಡಲ್ಲಿ ನಮ್ಮ ಆಸ್ತಿಯು ನಿನಗೆ ಸೇರುವುದು” ಎಂಬ ಷರತ್ತಿನೊಂದಿಗೆ ವೀಲುನಾಮೆಯ ಮೂಲಕ ಮನೆಯನ್ನು ಮಗಳ ಹೆಸರಿಗೆ ಮಾಡಲು ಒಪ್ಪಿಕೊಂಡರು.
ಆದರೆ ನಡೆದಿದ್ದೇ ಬೇರೆ!
2023 ರ ಏಪ್ರಿಲ್ 14 ರಂದು ಹೆತ್ತವರಿಬ್ಬರನ್ನೂ ಬ್ರಹ್ಮಾವರದ ಉಪನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋದ ಮಗಳು ಪ್ರೆಸಿಲ್ಲಾ ವೀಲುನಾಮೆ ನೋಂದಣಿ ಮಾಡುವ ಬದಲಾಗಿ ಅವರಿಗೆ ತಿಳಿಯದಂತೆ ಮನೆಯನ್ನೇ ಆಕೆಯ ಹೆಸರಿಗೆ ದಾನ ಪತ್ರ ತಯಾರಿಸಿ ತನ್ನ ಹೆಸರಿಗೆ ಮಾಡಿಕೊಂಡಳು. ಅಷ್ಟೇ ಅಲ್ಲದೇ ತನ್ನ ತಾಯಿಯಿಂದಲೂ ದಾನಪತ್ರಕ್ಕೆ ಸಾಕ್ಷಿಯಾಗಿ ಸಹಿಯನ್ನು ಹಾಕಿಸಿಕೊಂಡಳು. ಡಿಸೋಜರಿಗೆ ಓದು-ಬರಹವಿಲ್ಲದಿದ್ದರೂ ತಾನು ಸಹಿ ಹಾಕಿದ ದಾಖಲೆಯ ಪ್ರತಿಯೊಂದನ್ನು ನೀಡಲು ಆಗ್ರಹಿಸಿದರು. ಅದೇ ದಿನ ಪರಿಚಯದ ವಕೀಲರೊಬ್ಬರ ಬಳಿ ವಿಚಾರಿಸಿದಾಗ, ತಾವು ಸಹಿ ಮಾಡಿರುವುದು ವೀಲುನಾಮೆಯಲ್ಲ ಬದಲಾಗಿ ಅದು ಪ್ರೆಸಿಲ್ಲಾಳು ಸ್ಥಿರಾಸ್ತಿಯನ್ನು ಆಕೆಯ ಹೆಸರಿಗೆ ಮಾಡಿಸಿಕೊಂಡ ದಾನ ಪತ್ರವೆಂದು ತಿಳಿಯಿತು. ಅದಾಗಲೇ ಡಿಸೋಜರು ದಾನ ಪತ್ರಕ್ಕೆ ಸಹಿಹಾಕಿಯಾಗಿತ್ತು. ಬೇರೆ ಉಪಾಯ ಕಾಣದೇ ಅದೇ ದಿನ ಅವರು ಪ್ರಸಿಲ್ಲಾಳೊಂದಿಗೆ ಚರ್ಚಿಸಿ ಕರಾರು ಪತ್ರವೊಂದನ್ನು ಮಾಡಿಕೊಂಡರು. ಆ ಕರಾರಿನಲ್ಲಿ ಮಗಳಾದ ಪ್ರಸಿಲ್ಲಾರವರು ತಮ್ಮನ್ನು ಕೊನೆಯವರೆಗೂ ನೋಡಿಕೊಳ್ಳಬೇಕು, ಮತ್ತು ತಮ್ಮ ಜೀವಿತದ ಅವಧಿಯವರೆಗೂ ತಾವು ದಾನವಾಗಿ ನೀಡಿದ ಆಸ್ತಿಯನ್ನು ಯಾವ ಕಾರಣಕ್ಕೂ ಮಾರುವಂತಿಲ್ಲ ಎಂದು ಹಾಗೂ ನಮ್ಮ ಅಂತ್ಯಕ್ರಿಯೆಯನ್ನು ಪ್ರೆಸಿಲ್ಲಾಳೇ ನೋಡಲೇ ಬೇಕು ಎಂಬ ಷರತ್ತುಗಳನ್ನು ವಿಧಿಸಿದರು.
ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ದೂರು:
ಆನಂತರದ ದಿನಗಳಲ್ಲಿ ಮಗಳಾದ ಪೆಸಿಲ್ಲಾ ತಮ್ಮ ಪಾಲನೆ ಪೋಷಣೆಗೆ ಯಾವುದೇ ಹಣವನ್ನು ನೀಡದಿದ್ದಾಗ ಡಿಸೋಜ ದಂಪತಿಗಳು ಉಡುಪಿಯಲ್ಲಿರುವ ಮಾವನ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಅವರಲ್ಲಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಪ್ರತಿಷ್ಠಾನದ ಕಾರ್ಯಕರ್ತರು ಕುಂದಾಪುರದಲ್ಲಿರುವ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯ ಮಂಡಳಿಗೆ ದೂರುಪತ್ರವನ್ನು ತಯಾರಿಸಲು ಸಹಕಾರ ನೀಡಿದರು.
ತನ್ನ ವಾದಮಂಡಿಸಿದ ಪ್ರಸಿಲ್ಲಾ:
ನ್ಯಾಯಮಂಡಳಿಯ ಮುಂದೆ ಹಾಜರಾದ ಪ್ರಸಿಲ್ಲಾಳು ದೂರುದಾರರು ಅರ್ಜಿಯಲ್ಲಿ ಕಾಣಿಸಿರುವ ವಿಚಾರಗಳನ್ನು ಸುಳ್ಳಿನಿಂದ ಕೂಡಿದ್ದು, ಆಧಾರರಹಿತವಾಗಿವೆ ಎಂದರು. ದೂರುದಾರರಿಬ್ಬರ ಖರ್ಚುವೆಚ್ಚಗಳಿಗಾಗಿ ತಾನು ಸುಮಾರು 10ಲಕ್ಷಕ್ಕೂ ಮೀರಿ ವೆಚ್ಚಮಾಡಿರುವುದಾಗಿ ತಿಳಿಸಿದರು. ತನ್ನ ಆರ್ಥಿಕ ಪರಿಸ್ಥಿತಿ ತೀರಾಹದಗೆಟ್ಟಿದ್ದರೂ ಹೆತ್ತವರಿಬ್ಬರನ್ನು ತಾನಿರುವ ಮನೆಗೆ ಬರಲು ತಯಾರಿದ್ದಲ್ಲಿ ಅವರಿಬ್ಬರನ್ನು ನೋಡಿಕೊಳ್ಳುವುದಾಗಿ ತಿಳಿಸಿದರು. ಆದರೆ, ತಾನು ವೆಚ್ಚಮಾಡಿರುವ ಹಣಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಲಿಲ್ಲ.
ಎರಡು ಕಡೆಯ ವಾದಗಳನ್ನು ಆಲಿಸಿದ ನಿರ್ವಹಣಾ ನ್ಯಾಯಮಂಡಳಿಯ ಅಧ್ಯಕ್ಷ ಕೆ.ಮಹೇಶಚಂದ್ರರವರು ದೂರುದಾರರು ಬರೆದುಕೊಟ್ಟ ದಾನಪತ್ರ ಮತ್ತು ಅದಕ್ಕೆ ಪೂರಕವಾಗಿ ಮಾಡಿಕೊಂಡ ಕರಾರು ಪತ್ರದಂತೆ ಹೆತ್ತವರಿಬ್ಬರನ್ನೂ ನೋಡಿಕೊಳ್ಳುವ ಜವಾಬ್ದಾರಿ ಮಗಳಮೇಲಿರುವುದು ಮಾತ್ರವಲ್ಲ, ಹೆತ್ತವರನ್ನು ನೋಡಿಕೊಳ್ಳಲು ಇತರ ಮಕ್ಕಳು ಸಹಾಯ ಬೇಕಾಗಿರುತ್ತದೆ ಎಂದು ಪ್ರೆಸಿಲ್ಲಾಳಿಗೆ ತಿಳಿಸಿರುವುದರಿಂದ ದಾನ ಪತ್ರದ ಷರತ್ತುಗಳ ಉಲ್ಲಂಘನೆಯಾಗಿರುತ್ತದೆ. ಈ ಕಾರಣಗಳಿಂದಾಗಿ ದೂರುದಾರರು ಬರೆದುಕೊಟ್ಟು ದಾನಪತ್ರವನ್ನು ರದ್ದುಗೊಳಿಸಿದ್ದಾರೆ ಹಾಗೂ ಡಿಸೋಜ ದಂಪತಿಗಳಿಬ್ಬರ ಜೀವಿತದ ಕಾಲದವರೆಗೆ ಅವರ ದೈನಂದಿನ ಖರ್ಚುವೆಚ್ಚಗಳಿಗಾಗಿ ನಾಲ್ಕು ಮಂದಿ ಮಕ್ಕಳು ತಲಾ 1000ರೂಪಾಯಿಗಳನ್ನು ನೀಡಲು ಆದೇಶಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಲಾರೆನ್ಸ್ ಡಿಸೋಜಾ ನಮಗಿಬ್ಬರಿಗೂ ಆರೋಗ್ಯ ಚೆನ್ನಾಗಿಲ್ಲ. ಪ್ರತಿ ತಿಂಗಳು ನಮ್ಮಿಬ್ಬರ ಔಷಧಿಗಾಗಿ ರೂಪಾಯಿ 8ಸಾವಿರಕ್ಕಿಂತಲೂ ಹೆಚ್ಚು ಖರ್ಚುಮಾಡಬೇಕಿದೆ. ಅದಕ್ಕಾಗಿ ಈಗಲೂ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದೇನೆ. ನ್ಯಾಯಮಂಡಳಿಯ ಆದೇಶದಲ್ಲಿ ಪ್ರತಿತಿಂಗಳು ಎಲ್ಲಾ ಮಕ್ಕಳೂ ಸೇರಿ ಕೇವಲ 4 ಸಾವಿರ ರೂಪಾಯಿ ನೀಡುವಂತೆ ಆದೇಶಿಸಲಾಗಿದೆ. ಈ ಮೊತ್ತ ಯಾವುದಕ್ಕೂ ಸಾಲುವುದಿಲ್ಲ.
ಕನಿಷ್ಠ 10ಸಾವಿರ ರೂಪಾಯಿ ಸಿಗದಿದ್ದಲ್ಲಿ ನಾವು ಜೀವನ ಸಾಗಿಸುವುದು ಹೇಗೆ? ನಮಗೆ ನ್ಯಾಯಸಮ್ಮತವಾದ ನಿರ್ವಹಣಾ ಮೊತ್ತವನ್ನು ಪಡೆಯಲು ಜಿಲ್ಲಾಧಿಕಾರಿಯವರಲ್ಲಿ ದೂರುನೀಡಲು ಸಹಾಯ ಮಾಡುವಂತೆ ಪ್ರತಿಷ್ಠಾನವನ್ನು ವಿನಂತಿಸುತ್ತಿದ್ದೇವೆ ಮಾತ್ರವಲ್ಲ ನಮ್ಮ ಮನೆಗೆ ಸಂಬಂಧಿಸಿದ ಮೂಲ ದಾಖಲೆಗಳನ್ನೆಲ್ಲ ನಮ್ಮ ಮಗಳು ತೆಗೆದುಕೊಂಡು ಹೋಗಿದ್ದು ಅದನ್ನು ಮರಳಿಪಡೆಯಲು ಸಹಕಾರ ನೀಡುವಂತೆ ಮನವಿ ಮಾಡಿದರು