ತಮಿಳುನಾಡು ಮೀನುಗಾರಿಕೆ ವಿವಿ ಯೋಜನಾ ಮಂಡಳಿ ಸದಸ್ಯರಾಗಿ ಡಾ. ಶಿವಪ್ರಕಾಶ್  

Spread the love

ತಮಿಳುನಾಡು ಮೀನುಗಾರಿಕೆ ವಿವಿ ಯೋಜನಾ ಮಂಡಳಿ ಸದಸ್ಯರಾಗಿ ಡಾ. ಶಿವಪ್ರಕಾಶ್  

ಮಂಗಳೂರು:  ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಮೀನುಗಾರಿಕೆ ಸಂಪನ್ಮೂಲ ಹಾಗೂ ನಿರ್ವಹಣೆ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಎಸ್.ಎಂ. ಶಿವಪ್ರಕಾಶ್ ಇವರು ತಮಿಳುನಾಡು ಮೀನುಗಾರಿಕಾ ವಿಶ್ವವಿದ್ಯಾಲಯದ ಯೋಜನಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ತಮಿಳುನಾಡು ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಫೆಲಿಕ್ಸ್  ಅವರು ಡಾ. ಎಸ್.ಎಂ. ಶಿವಪ್ರಕಾಶ್ ಅವರನ್ನು 3 ವರ್ಷಗಳ ಅವಧಿಗೆ (2018-2020) ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ ನೂತನವಾಗಿ ಆರಂಭಗೊಂಡಿರುವ ತಮಿಳುನಾಡು ಮೀನುಗಾರಿಕಾ ವಿಶ್ವವಿದ್ಯಾಲಯದ ಆರ್ಥಿಕ ಯೋಜನೆಗಳು ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ ಸಾಧನೆ ಹಾಗೂ ವಿಶ್ವವಿದ್ಯಾಲಯದ ನೀಲನಕ್ಷೆ ಕುರಿತು ಪರಿಶೀಲಿಸಿ ವಿಶ್ವವಿದ್ಯಾಲಯಕ್ಕೆ ಮಾರ್ಗದರ್ಶನ ನೀಡುವಂತೆ ಆದೇಶಿಸಲಾಗಿದೆ.

ಡಾ. ಎಸ್. ಎಂ. ಶಿವಪ್ರಕಾಶ್ ಅವರು ಈ ಮೊದಲು ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನಲ್ಲಿ ವಿಸ್ತರಣಾ ನಿರ್ದೇಶಕರಾಗಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿ, ಸದ್ಯ ಮಂಗಳೂರು ಮೀನುಗಾರಿಕೆ ಮಹಾ ವಿದ್ಯಾಲಯಕ್ಕೆ ಮರಳಿದ್ದಾರೆ. 35 ವರ್ಷಗಳ ಶಿಕ್ಷಕ ವೃತ್ತಿಯ ಅನುಭವ ಹೊಂದಿರುವ ಇವರಿಗೆ ತಮ್ಮ ಸಂಶೋಧನಾ ಪ್ರಬಂದಕ್ಕೆ ಭಾರತೀಯ ಇಕ್ತಿಯೋಲಜಿ ಆಕಾಡಮಿಯಿಂದ 1986 ರಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಇಂಟರ್‍ಲ್ಯಾಬ್ ಅಂಬಾಲ ಚಿನ್ನದ ಪದಕ ಗಳಿಸಿರುತ್ತಾರೆ. ನಾರ್ವೆ (1987-88), ಇಂಗ್ಲೆಂಡ್ (1991) ಹಾಗೂ ಕೆನಡಾ (1995)ರಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿದ ಅನುಭವ ಇವರದಾಗಿರುತ್ತದೆ.

ಅಲ್ಲದೆ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ವಿಸ್ತರಣಾ ನಿರ್ದೇಶಕರಾಗಿದ್ದ ವೇಳೆ ರೈತರ ಕೈಗೆ ತಂತ್ರಜ್ಞಾನಗಳ 31 ಪುಸ್ತಕಗಳನ್ನು ಕೇವಲ ರೂ. 20ರ ಬೆಲೆಯನ್ನು ಪ್ರಕಟಿಸಿ ರೈತರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೈದರಬಾದ್-ಕರ್ನಾಟಕ ಅಭಿವೃದ್ಧಿ ನಿಗಮವು ಈ ರೈತ ಸಾಹಿತ್ಯ ಪುಸ್ತಕಗಳ 38,000 ಪ್ರತಿಗಳನ್ನು ಖರೀದಿಸಿ ಹೈದರಬಾದ್ ಕರ್ನಾಟಕ ಭಾಗದ 6 ಜಿಲ್ಲೆಗಳ ಎಲ್ಲಾ ಗ್ರಾಮ ಪ್ರಂಚಾಯತ್ ಗ್ರಂಥಾಲಯಗಳಿಗೆ ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love