ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದ ಶಿರೂರು ಸ್ವಾಮಿ – ವಕೀಲ ರವಿಕಿರಣ್ ಮುರ್ಡೇಶ್ವರ
ಉಡುಪಿ: ಪಟ್ಟದ ದೇವರ ವಿಚಾರಕ್ಕೆ ಸಂಬಂಧಿಸಿದಂತೆ ತಮಗೆ ಜೀವ ಭಯ ಇದೆ ಎಂದು ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ತಮ್ಮ ಬಳಿ ಆತಂಕ ವ್ಯಕ್ತಪಡಿಸಿದ್ದರು ಎಂದು ಶ್ರೀಗಳ ಪರ ಕೋರ್ಟ್ ನಲ್ಲಿ ಕೇವಿಯಟ್ ಸಲ್ಲಿಸಿದ್ದ ವಕೀಲ ರವಿಕಿರಣ್ ಮುರ್ಡೇಶ್ವರ್ ಅವರು ಹೇಳಿದ್ದಾರೆ.
ಶ್ರೀಗಳ ಅಕಾಲಿಕ ನಿಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಂದಾಪುರ ಮೂಲಕ ವಕೀಲ ಮುರ್ಡೇಶ್ವರ್ ಅವರು, ಶಿರೂರು ಮಠದ ಪಟ್ಟದ ದೇವರಾದ ವಿಠ್ಠಲ ಮತ್ತು ಇನ್ನಿತರ ಮೂರ್ತಿಗಳನ್ನು ವಾಪಸ್ ಪಡೆಯಲು ಕ್ರಿಮಿನಲ್ ಕೇಸ್ ಹಾಕುವಂತೆ ನನಗೆ ಸೂಚಿಸಿದ್ದರು. ಸ್ವಾಮೀಜಿ ಬಯಸಿದಂತೆ ನಾನು ಕೃಷ್ಣ ಮಠದ ಆರು ಮಠಾಧಿಪತಿಗಳ ವಿರುದ್ಧ ಕೋರ್ಟ್ ನಲ್ಲಿ ಕೇವಿಯಟ್ ಸಲ್ಲಿಸಿದ್ದೆ ಎಂದರು.
ಕಳೆದ ಜೂನ್ 8ರಂದು ಶಿರೂರು ಶ್ರೀಗಳು ನಮ್ಮ ಕಚೇರಿಗೆ ಬಂದಿದ್ದರು. ಅಷ್ಟ ಮಠಾಧೀಪತಿಗಳ ಜೊತೆಗೆ ಇರುವ ಭಿನ್ನಾಭಿಪ್ರಾಯವನ್ನು ಸುಮಾರು 2 ಗಂಟೆಗಳ ಕಾಲ ವಿಸ್ತೃತವಾಗಿ ಹೇಳಿದ್ದರು. ಅಲ್ಲದೆ ಈ ವೇಳೆ ತಮ್ಮ ಜೀವಕ್ಕೆ ಆಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈಗ ಅವರು ಸಾವನ್ನಪ್ಪಿದ್ದಾರೆ. ಸ್ವಾಮೀಜಿ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ವಕೀಲ ಮುರ್ಡೇಶ್ವರ್ ಅವರು ಒತ್ತಾಯಿಸಿದ್ದಾರೆ.
ಶ್ರೀಗಳು ಅನಾರೋಗ್ಯ ಸಂದರ್ಭದಲ್ಲಿ ವಿಠ್ಠಲ ಮತ್ತು ಇನ್ನಿತರ ಮೂರ್ತಿಗಳನ್ನು ಕೃಷ್ಣಮಠದಲ್ಲಿ ಇಟ್ಟಿದ್ದರು. ಅವನ್ನು ವಾಪಸ್ ಪಡೆಯಲು ಕ್ರಿಮಿನಲ್ ಕೇಸ್ ಹಾಕಬೇಕು ಎಂದಿದ್ದರು. ಅದರಂತೆ ನಾನು ಫಿರ್ಯಾದಿ ಸಿದ್ಧಪಿಡಿಸಿದ್ದೆ. ಅಷ್ಟರಲ್ಲಿ ದುರಾದೃಷ್ಟವಶಾತ್ ಅವರ ಸಾವಿನ ಸುದ್ದಿ ಬಂದಿದೆ ಎಂದರು.
ಕಳೆದ ಮಂಗಳವಾರ ಶಿರೂರಿನಲ್ಲಿ ನಡೆದಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಕ್ಕಳ ಜತೆ ಊಟ ಮಾಡಿದ್ದ ಶ್ರೀಗಳ ಆಹಾರದಲ್ಲಿ ವ್ಯತ್ಯಯವಾಗಿ ವಾಂತಿಬೇಧಿ ಸಹಿತ ಉದರ ಸಂಬಂಧಿ ಸಮಸ್ಯೆ ತಲೆದೋರಿತ್ತು.
ಮಂಗಳವಾರ ರಾತ್ರಿ ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಶ್ರೀಗಳ ದೇಹದಲ್ಲಿ ವಿಷಪ್ರಾಶನ ಆಗಿರುವ ಶಂಕೆಯಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ