ತರಬೇತಿಯಿಂದ ಹೆಚ್ಚಿನ ಅರಿವು ಜ್ಞಾನ – ರವಿರಾಜ ಹೆಗ್ಡೆ
ಮಂಗಳೂರು : ಕಾರ್ಯದಕ್ಷತೆ ತರಬೇತಿ ಶಿಬಿರದಿಂದ ಇನ್ನೂ ಚೆನ್ನಾಗಿ ಕೆಲಸ ಮಾಡುವರೇ ಹೆಚ್ಚಿನ ಪ್ರಯೋಜನವಾಗುವುದಲ್ಲದೇ ಕಾನೂನು ಅರಿವು, ಜ್ಞಾನ ವೃಧ್ಧಿಯಾಗುತ್ತದೆ. ದ. ಕ. ಜಿಲ್ಲೆಯಲ್ಲಿ 100 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿದ್ದು, ದ.ಕ. ಜಿಲ್ಲೆಯಲ್ಲಿ ಒಟ್ಟು ಸುಮಾರು 33000 ಸಾವಿರ ಮಹಿಳಾ ಸದಸ್ಯರು ದಿನವಹಿ ಹಾಲು ಹಾಕುತ್ತಿದ್ದಾರೆ. ಸದರಿ ಮಹಿಳಾ ಸದಸ್ಯರಿಗೆ ಆರ್ಥಿಕ ಅಭಿವೃಧ್ದಿ, ವ್ಯಕ್ತಿತ್ವ ಬೆಳೆಸಿಕೊಳ್ಳಲು ಅವಕಾಶವಾಗುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಲಿ. ಮಂಗಳೂರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ನಿ.) ಮಂಗಳೂರು ಇವರ ಆಶ್ರಯದಲ್ಲಿ ದ.ಕ. ಜಿಲ್ಲೆಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಕಾರ್ಯದಕ್ಷತೆ ತರಬೇತಿ ಶಿಬಿರವು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ ಮಂಗಳೂರಿನಲ್ಲಿ ನಡೆಯಿತು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ತರಬೇತಿ ಶಿಬಿರದ ಸಭಾಧ್ಯಕ್ಷತೆ ವಹಿಸಿದ್ದು, ಮುಖ್ಯ ಅಥಿತಿಯಾಗಿ ದ.ಕ. ಹಾಲು ಒಕ್ಕೂಟದ ನಿರ್ದೇಶಕಿ ವೀಣಾ ರೈ, ಸಂಪನ್ಮೂಲ ವ್ಯಕ್ತಿಯಾಗಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕರಾದ ಡಾ. ನಿತ್ಯಾನಂದ ಭಕ್ತ, ಉಪ ವ್ಯವಸ್ಥಾಪಕರಾದ ಡಾ. ಸಂಪತ್‍ಕುಮಾರ್, ಡಾ. ರವಿರಾಜ್ ಉಡುಪ, ಮೂಡಬಿದ್ರೆ ಸಹಕಾರ ತರಬೇತಿ ಕೇಂದ್ರದ ಉಪನ್ಯಾಸಕ ಬಿಂದು ಬಿ. ನಾಯರ್ ಉಪಸ್ಥಿತರಿದ್ದರು.
ವಿಸ್ತರಣಾಧಿಕಾರಿಗಳಾದ ಮಾಲತಿ ಸ್ವಾಗತಿಸಿ, ಜಗದೀಶ್ ವಂದಿಸಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್‍ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. 92 ಮಂದಿ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.