ತಲಕಾವೇರಿ ಗುಡ್ಡ ಜರಿತ ; ಅರ್ಚಕರ ಮನೆಗಳ ಪ್ರದೇಶಕ್ಕೆ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಭೇಟಿ
ಮಡಿಕೇರಿ : ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಬುಧವಾರ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿರುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿ ಅತಿಯಾದ ಮಳೆ ಮತ್ತು ಮಂಜು ಮುಸುಕಿರುವ ಕಾರಣ ಪರಿಹಾರ ಕಾರ್ಯಾಚರಣೆ ನಡೆಸಲು ತೊಡಕಾಗಿದ್ದು, ಶುಕ್ರವಾರ ಪರಿಹಾರ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದ್ದಾರೆ.
ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಯಾವುದೇ ವಾಹನಗಳು ತೆರಳಲು ಸಾಧ್ಯವಾಗುತ್ತಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.