Home Mangalorean News Kannada News ಕುಂದಾಪುರ: ತಲ್ಲೂರಿನಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಕುಂದಾಪುರ: ತಲ್ಲೂರಿನಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

SONY DSC
Spread the love

ಕುಂದಾಪುರ: ಕರಾವಳಿ ಬಂಟರ ಬಳಗ ಸಂಸ್ಥೆ ಮತ್ತು ಮಾಸಪತ್ರಿಕೆಯ ಆಶ್ರಯದಲ್ಲಿ ಜನವರಿ 2ರಂದು ಶನಿವಾರ ತಲ್ಲೂರಿನ ಶಾಲಾ ಮೈದಾನದಲ್ಲಿ ಭಕ್ತಿ-ಭಾವಗಳನ್ನು ಬೆಸೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮತ್ತು ಭಾವೈಕ್ಯವನ್ನು ಮೂಡಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕುಂದಾಪುರ ತಾಲೂಕು ಮತ್ತು ಸುತ್ತಲಿನ ಗ್ರಾಮಗಳನ್ನು ಪ್ರತಿನಿಧಿಸುವ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾದರು. ಅಪರಾಹ್ನ ೩ ಗಂಟೆಗೆ ಕುಂದಾಪುರದಿಂದ ಹೊರಟ ಶೋಭಾಯಾತ್ರೆ ಸಂಜೆ ೪ ಗಂಟೆಯ ವೇಳೆಗೆ ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನವನ್ನು ತಲುಪಿ, ಅಲ್ಲಿಂದ ಭಜನಾ ತಂಡಗಳ ಮೂಲಕ ಶ್ರೀನಿವಾಸನ ವಿಗ್ರಹವನ್ನು ಕಲ್ಯಾಣ ಮಹೋತ್ಸವ  ವೇದಿಕೆಗೆ ಕರೆತರಲಾಯಿತು. ಶೋಭಾಯಾತ್ರೆ ನಡೆದ ಮಾರ್ಗದುದ್ದಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೇವರ ದರ್ಶನ ಪಡೆದರು.

SONY DSC

ಬೆಂಗಳೂರಿನ ಶ್ರೀ ವಾರಿ ಪೌಂಡೇಶನ್ ನ ವೇಂಕಟೇಶ ಮೂರ್ತಿ ಮತ್ತು ಬಳಗದವರು ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಇದರ ಅಂಗವಾಗಿ  ವೇದಿಕೆಗೆ ಶ್ರೀ ವೆಂಕಟರಮಣನ ಆಗಮನ, ವಧೂ ನಿರೀಕ್ಷಣೆ, ಪದ್ಮಾವತಿಯ ಆಗಮನ, ಅರಿಶಿನ-ಕುಂಕುಮ ಸಮರ್ಪಣೆ, ಧಾರೆ ಮಣಿ ಕಟ್ಟುವಿಕೆ, ಶ್ರೀನಿವಾಸನಿಗೆ ಮಧುಕರ್ಪ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾದಿ ಕಪ್ಪ ಕಾಣಿಕೆಗಳ ಸಮರ್ಪಣೆ, ಅಗ್ನಿ ಪ್ರತಿಷ್ಠಾಪೂರ್ವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳು ನಡೆದವು. ಆ ಬಳಿಕ ಕಲ್ಯಾಣೋತ್ಸವದ ಕೃಷ್ಣಾರ್ಪಣವಾಗಿ ಮಹಾ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಿಸಲಾಯಿತು. ಪ್ರಸಾದ ರೂಪದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ವಿಧಿಗಳು ಮುಕ್ತಾಯಗೊಂಡ ಬಳಿಕ ಧಾರ್ಮಿಕ ಸಭೆ ಜರುಗಿತು. ಹಿರಿಯ ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಹರಿದಾಸ ಸಂಘದ ಅಧ್ಯಕ್ಷ ಹರಾ ನಾಗರಾಜ ಆಚಾರ್ಯ ಧಾರ್ಮಿಕ ಪ್ರವಚನ ನೀಡಿದರು.   ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ, ಮಂಗಳುರು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಕುಂದಾಪುರ ಬಂಟರ ಯಾನೆ ನಾಡವರ್ ಸಂಘದ ಅಧ್ಯಕ್ಷ ಶ್ರೀ ಸಂಪಿಗೇಡಿ ಸಂಜೀವ ಶೆಟ್ಟಿ, ಉದ್ಯಮಿಗಳಾದ ಎಂ. ವಿ ರಾಘವೇಂದ್ರರಾವ್, ಅರುಣ್ ಕುಮರ್ ಶೆಟ್ಟಿ ಕುಂದಾಪುರ, ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ, ತಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮಧರ್ಶಿ ವಸಂತ ಆರ್ ಹೆಗ್ಡೆ, ಹಟ್ಟಿಯಂಗಡಿಯ ಜೈನ್ ದೇವಸ್ಥಾನದ ಧರ್ಮಧರ್ಶಿ ಎಚ್. ಚಂದ್ರರಾಜೇಂದ್ರ ಅರಸ್, ಶಾಲಿನಿ ಶೆಟ್ಟಿ ಕೆಂಚನೂರು,

ಉಧ್ಯಮಿ ಸಬ್ಲಾಡಿ ಮಂಜಯ್ಯ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯಧ್ಯಕ್ಷ ರವೀಂದ್ರ ಶೆಟ್ಟಿ ಹಟ್ಟಿಯಂಗಡಿ ಮೊದಲಾದವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ತಾಲೂಕಿನ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುವ ಹದಿನಾರು ಮಂದಿ ಹಿರಿಯ ಭಜನಾ ಕಲಾವಿದರನ್ನು ಕರಾವಳಿ ಬಂಟರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸ್ವಾಗತ ಸಮಿತಿಯ ಪ್ರದಾನ ಸಂಚಾಲಕ ಟಿ.ಬಿ.ಶೆಟ್ಟಿ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ ಹಳ್ನಾಡು ವಂದಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಮತ್ತು ನಾಗರತ್ನ ಆರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version