Home Mangalorean News Kannada News ತಲ್ಲೂರಿನ ನೂತನ ನಕ್ಷತ್ರಾಕಾರದ ಚರ್ಚು ಲೋಕಾರ್ಪಣೆ

ತಲ್ಲೂರಿನ ನೂತನ ನಕ್ಷತ್ರಾಕಾರದ ಚರ್ಚು ಲೋಕಾರ್ಪಣೆ

Spread the love

ಕುಂದಾಪುರ: ದೇವಾಲಯಗಳು ದೇವರ ಅಸ್ತಿತ್ವವನ್ನು ತೋರ್ಪಡಿಸುವ ಸಂಕೇತಗಳು ಆಗಿವೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಗುರುವಾರ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಿದ ಕರ್ನಾಟಕದ ಪ್ರಥಮ ನಕ್ಷತ್ರಾಕಾರದ ಚರ್ಚನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

image001tallur-church-inuguration-20160512

ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಉನ್ನತವಾದ ಸ್ಥಾನವಿದ್ದು, ದೇವರು ಹಾಗೂ ಮನುಷ್ಯರ ನಡುವಿನ ಸಂಬಂಧವನ್ನು ಒಗ್ಗೂಡಿಸುವ ಸ್ಥಳವಾಗಿದೆ. ದೇವಾಲಯಗಳ ಪವಿತ್ರತೆಯನ್ನು ಅರಿತು ಅದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಭಕ್ತ ಸಮುದಾಯಕ್ಕೆ ಸೇರಿದ್ದಾಗಿದೆ. ಇಂದು ನಮ್ಮ ರಾಜ್ಯ ಬರದಿಂದ ತತ್ತರಿಸುತ್ತಿದ್ದು ಕುಡಿಯುವ ನೀರಿಗಾಗಿ ಎಲ್ಲೆಂದರಲ್ಲಿ ಆಹಾಕಾರ ಎದ್ದಿದೆ. ಇದಕ್ಕೆ ಪ್ರಮುಖ ಕಾರಣ ನಾವು ಇಂದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಮ್ಮ ಲಾಭದ ಆಸೆಗಾಗಿ ನಾಶ ಮಾಡಿರುವುದು ಇದರಿಂದ ತಾಪಮಾನದಲ್ಲಿ ವೈಪರಿತ್ಯ ಉಂಟಾಗಿ ನೀರಿನ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಚರ್ಚಿನ ಪಾಲಕ ಸಂತ ಫ್ರಾನ್ಸಿಸ್ ಆಸಿಸಿ ಸದಾ ಪರಿಸರವನ್ನು ಪ್ರೀತಿಸಿದವರು ಅದರಂತೆ ನಾವು ಕೂಡ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿಕ್ಕ ವನವನ್ನು ಬೆಳೆಸಿ ಹಸಿರು ಪರಿಸರವನ್ನು ನಿರ್ಮಿಸುವಲ್ಲಿ ಪಣತೊಡಬೇಕು. ಧರ್ಮಪ್ರಾಂತ್ಯದ ವತಿಯಿಂದ ಮಳೆಗಾಗಿ ಕಳೆದ ಒಂದು ತಿಂಗಳಿನಿಂದ ಸದಾ ಪ್ರಾರ್ಥನೆಯನ್ನು ಆರಂಭಿಸಲಾಗಿದ್ದು ಅದನ್ನು ಮುಂದುವರೆಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಚರ್ಚಿನ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದವರಿಗೆ ಸನ್ಮಾನ ನಡೆಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ ಪ್ರೀತಿ ಕರುಣೆ ಹಾಗೂ ದಯೆಯನ್ನು ಕಲಿಸಿದ ಯೇಸುಸ್ವಾಮಿಯ ಮಾರ್ಗದರ್ಶನದಲ್ಲಿ ಇಂದು ಜಗತ್ತಿನೆಲ್ಲೆಡೆ ಆರಾಧನೆಗೆ ದೇವಾಲಯ ನಿರ್ಮಿಸುವುದರೊಂದಿಗೆ ಪರಿಸರದ ಮಕ್ಕಳಿಗೆ ಉತ್ತಮ ಸಂಸ್ಕೃಯನ್ನು ಕಲಿಸುವ ನಿಟ್ಟಿನಲ್ಲಿ ವಿದ್ಯಾ ಕೇಂದ್ರಗಳನ್ನು ನಿರ್ಮಿಸಿ ಜನರಿಗೆ ನಾಗರಿಕತೆಯ ಅರಿವು ಮೂಡಿಸುವ ಮಹತ್ತರ ಕೆಲಸವನ್ನು ಕ್ರಿಶ್ಚಿಯನ್ ಸಂಸ್ಥೆಗಳು ಮಾಡುತ್ತಿದ್ದು ಇದು ಶ್ಲಾಘನೀಯ. ಶಿಕ್ಷಣದಲ್ಲಿ ಇಂದು ನಮ್ಮ ಜಿಲ್ಲೆಯು ಕೂಡ ಶಿಕ್ಷಣದಲ್ಲಿ ಮುಂದುವರೆಯಲು ಕ್ರೈಸ್ಥ ಶಿಕ್ಷಣ ಸಂಸ್ಥೆಗಳ ಪಾತ್ರವೂ ಕೂಡ ಮಹತ್ತರವಾದದು. ಇಂದು ಪ್ರಕೃತಿ ಕೂಡ ಮನುಷ್ಯನ ಮೇಲೆ ಮುನಿದು ಕಾಲಕಾಲಕ್ಕೆ ಆಗಬೇಕಾದ ಮಳೆ ಕೂಡ ಕೈಕೊಡುವ ಪರಿಸ್ಥಿತಿ ಉಂಟಾಗಿದ್ದು ದೇವಾಲಯಗಳು ಪರಿಸರ ಜಾಗೃತಿಯ ಕೆಲಸ ಕೈಗೊಂಡಿರುವುದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದು ಇದನ್ನು ಮುಂದುವರೆಸುವಂತೆ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ನೂತನ ದೇವಾಲಯ ಹಾಗೂ ಮೇರಿ ಮಾತೆಯ ಗ್ರೊಟ್ಟೊವನ್ನು ಉದ್ಘಾಟಿಸಿ ಆಶೀರ್ವಚನ ನಡೆಸಿ ಪವಿತ್ರ ಬಲಿಪೂಜೆಯನ್ನು ಸಮರ್ಪಿಸಿದರು. ಸಭಾ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವುದರ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಒಂದು ಕೋಟಿಯಿಂದ ಹಿಡಿದು ರೂ 50 ಸಾವಿರ ವರೆಗೆ ದೇಣಿಗೆ ನೀಡಿದ ದಾನಿಗಳನ್ನು, ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದವರನ್ನು, ಚರ್ಚಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ಧರ್ಮಗುರುಗಳನ್ನು, ಪ್ರಸ್ತುತ ಧರ್ಮಗುರುಗಳು, ಪಾಲನಾ ಸಮಿತಿಯ ಉಪಾಧ್ಯಕ್ಷ ಕಾರ್ಯದರ್ಶಿಯವರನ್ನು ಸನ್ಮಾನಿಸಲಾಯಿತು. ಚರ್ಚಿನ ನೂತನ ಕಟ್ಟಡ ಉದ್ಘಾಟನೆಯ ಪ್ರಯುಕ್ತ ಹೊರತರಲಾದ ಸ್ಮರಣ ಸಂಚಿಕೆಯನ್ನು ಬೈಂದೂರು ಶಾಸಕ ಗೋಪಾಲ ಪೂಜಾರಿ ಬಿಡುಗಡೆಗೊಳಿಸಿದರು. ಪೋಪ್ ಜಗದ್ಗುರುಗಳಿಂದ ಕಳುಹಿಸಲಾದ ಶುಭ ಸಂದೇಶವನ್ನು ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಸ್ಟ್ಯಾನಿ ಡಿ’ಸಿಲ್ವಾ ವಾಚಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪ್‍ಚಂದ್ರ ಶೆಟ್ಟಿ, ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ ಅನಿಲ್ ಡಿ’ಸೋಜಾ, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ದೇವಾಸ್ಥಾನದ ಧರ್ಮದರ್ಶಿ ವೇದಮೂರ್ತಿ ವಿದ್ವಾನ್ ರಾಮಚಂದ್ರ ಭಟ್, ಮಾವಿನಕಟ್ಟೆ ಆಲ್ ಬದ್ರಿಯಾ ಮಸೀದಿಯ ಖತೀಬರಾದ ಬಿ ಎ ಇಸ್ಮಾಯಿಲ್ ಮದನಿ ಚರ್ಚಿನ ಧರ್ಮಗುರು ವಂ ಸುನಿಲ್ ವೇಗಸ್, ಜಯರಾಣಿ ಕಾನ್ವೆಂಟಿನ ಸಿಸ್ಟರ್ ಆನ್ಸಿ ಪೌಲ್ ಉಪಸ್ಥಿತರಿದ್ದರು.

ಚರ್ಚಿನ ಪಾಲನ ಸಮಿತಿಯ ಉಪಾಧ್ಯಕ್ಷ ಅರುಣ್ ಮೆಂಡೊನ್ಸಾ ಸ್ವಾಗತಿಸಿ, ಚರ್ಚಿನ ಧರ್ಮಗುರು ವಂ ಸುನಿಲ್ ವೇಗಸ್ ವಂದಿಸಿದರು. ಅನಿಲ್ ಡಿ’ಸಿಲ್ವಾ ಹಾಗೂ ನೀತಾ ಮೆಂಡೊನ್ಸಾ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version