ತವರಿಗೆ ಆಗಮಿಸಿದ ನರ್ಸ್ ಹೆಝೆಲ್ ಮೃತದೇಹ; ಶಿರ್ವ ಚರ್ಚಿನಲ್ಲಿ ಅಂತ್ಯಸಂಸ್ಕಾರ
ಉಡುಪಿ: ಸೌದಿ ಅರೇಬಿಯಾದಲ್ಲಿ ಸಾವನ್ನಪಿದ ಅಲ್ಮಿಕ್ವ ಆಸ್ಪತ್ರೆಯ ನರ್ಸ್, ಶಿರ್ವ ಸಮೀಪದ ಕುತ್ಯಾರು ಮೂಲದ ಅಗರ್ದಂಡೆ ನಿವಾಸಿ ಹೆಝೆಲ್ ಜೋತ್ಸ್ನಾ ಮಥಾಯಸ್ (28) ಮೃತದೇಹವು 70 ದಿನಗಳ ಬಳಿಕ ಗುರುವಾರ ತವರೂರಿಗೆ ತಲುಪಿದ್ದು, ಮೃತದೇಹದ ಅಂತ್ಯಸಂಸ್ಕಾರವನ್ನು ಇಂದು ಶಿರ್ವ ಆರೋಗ್ಯ ಮಾತಾ ಚರ್ಚ್ನಲ್ಲಿ ನೆರವೇರಿಸಲಾಯಿತು.
ಕಳೆದ ಎರಡು ತಿಂಗಳಿನಿಂದ ಅವರ ಕುಟುಂಬದ ಪವರ್ ಆಫ್ ಅಟಾರ್ನಿ ಹೋಲ್ಡರ್ ಡೆನ್ನಿಸ್ ನೊರೋನ್ಹಾ, ಹೆಝಲ್ರ ಪಾರ್ಥಿವ ಶರೀರವನ್ನು ತಾಯ್ನಡಿಗೆ ತರಲು ಪ್ರಯತ್ನಿಸುತ್ತಿದ್ದರು. ಸೌದಿಯ ಅಲ್ ಮಿಕ್ವಾ ಆಸ್ಪತ್ರೆಯಲ್ಲಿ ಸಂಶಯಾಸ್ಪದ ಸಾವನ್ನಪ್ಪಿದ್ದ ಹೆಝಲ್ ಡೆತ್ ನೋಟ್ನಲ್ಲಿ ಸಹೋದ್ಯೋಗಿ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಸೌದಿ ಪೊಲೀಸರು ಈ ವ್ಯಕ್ತಿಯನ್ನು ಬಂಧಿಸಿ, ಕಾನೂನು ಪ್ರಕ್ರಿಯೆ ಮುಗಿದಿರುವುದರಿಂದ ಹೆಝಲ್ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದರು.
ಗುರುವಾರ ಸಂಜೆ ಊರಿಗೆ ಆಗಮಿಸಿದ ಪಾರ್ಥಿವ ಶರೀರವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಪಾರ್ಥಿವ ಶರೀರ ವನ್ನು ಕುತ್ಯಾರಿನ ನಿವಾಸಕ್ಕೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಬಳಿಕ ಸಂಜೆ ಶಿರ್ವ ಆರೋಗ್ಯ ಮಾತಾ ಚರ್ಚ್ನಲ್ಲಿ ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅತೀ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಉಪಸ್ಥಿತಿಯಲ್ಲಿ ಚರ್ಚ್ನ ಹಿರಿಯ ಧರ್ಮ ಗುರುಗಳಾದ ರೆ.ಫಾ.ಡೆನಿಸ್ ಎ.ಡೇಸಾ ನೇತೃತ್ವದಲ್ಲಿ ಸಾರ್ವಜನಿಕ ಬಲಿಪೂಜೆ ಸೇರಿದಂತೆ ವಿವಿಧ ಪ್ರಾರ್ಥನಾ ವಿಧಿಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಇದರಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಜಿಪಂ ಸದಸ್ಯರಾದ ಶಿಲ್ಪಾಜಿ.ಸುವರ್ಣ, ವಿಲ್ಸನ್ ರೊಡ್ರಿಗಸ್, ಗೀತಾಂಜಲಿ ಸುವರ್ಣ, ತಾಪಂ ಸದಸ್ಯರಾದ ಮೈಕಲ್ ರಮೇಶ್ ಡಿಸೋಜ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸಮಾಜ ಸೇವಕ ಕುತ್ಯಾರು ಪ್ರಸಾದ್ ಶೆಟ್ಟಿ ಹಾಗೂ ಇತರರು ಭಾಗವಹಿಸಿ ಶ್ರದ್ಧಾಂಜಲಿ ಅರ್ಪಿಸಿದರು.