ತಾಕತ್ತಿದ್ದರೆ ಶೋಭಾ ಕರಂದ್ಲಾಜೆ ರಮಾನಾಥ ರೈ ವಿರುದ್ದ ಸ್ಪರ್ಧಿಸಿ ಗೆಲ್ಲಲಿ; ಶಾಲೆಟ್ ಪಿಂಟೊ

Spread the love

ತಾಕತ್ತಿದ್ದರೆ ಶೋಭಾ ಕರಂದ್ಲಾಜೆ ರಮಾನಾಥ ರೈ ವಿರುದ್ದ ಸ್ಪರ್ಧಿಸಿ ಗೆಲ್ಲಲಿ; ಶಾಲೆಟ್ ಪಿಂಟೊ

ಮಂಗಳೂರು: ಸಚಿವ ರಮಾನಾಥ ರೈ ವಿರುದ್ದ ಅಪಸ್ವರ ಎತ್ತುವ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ತಾಕತ್ತಿದ್ದರೆ ರೈ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಅದರ ಬಳಿಕ ರೈ ವಿರುದ್ದ ದನಿ ಎತ್ತಲಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಚಿವ ರಮಾನಾಥ ರೈ ಜಾತ್ಯಾತೀತ ಮನೋಭಾವದ ವ್ಯಕ್ತಿಯಾಗಿದ್ದು ಸರ್ವರಿಗೂ ಸಮಾನವಾಗಿ ಗೌರವಿಸುತ್ತಾರೆ. ಆದರೆ ಜಿಲ್ಲಾ ವರಿಷ್ಠಾಧಿಕಾರಿಗೆ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಕ್ರಮ ಕೈಗೊಳ್ಳಲು ತಿಳಿಸಿದ್ದಕ್ಕೆ ಬಿಜೆಪಿ ಪಕ್ಷ ಅವರ ವಿರುದ್ದ ಪ್ರತಿಭಟನೆ ನಡೆಸುತ್ತಿದೆ. ಕೆಲವೊಂದು ಮಾಧ್ಯಮಗಳೂ ಕೂಡ ರೈ ಅವರನ್ನು ಕೆಟ್ಟದಾಗಿ ಬಿಂಬಿಸಲು ಹೊರಟಿದ್ದು, ವೀಡಿಯೋ ತುಣುಕೊಂದನ್ನು ಹಿಡಿದುಕೊಂಡು ಬಿಜೆಪಿ ಕಲ್ಲಡ್ಕದಲ್ಲಿ ಕೋಮು ಘರ್ಷಣೆ ನಡೆಸಲು ಉದ್ದೇಶಿಸಿವೆ.

ಸಂಸದೆ ಶೋಭಾ ಕರಂದ್ಲಾಜೆಗೆ ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಮಯವಿಲ್ಲ. ಅವರ ಕ್ಷೇತ್ರದ ಜನತೆ ಅವರು ನಾಪತ್ತೆಯಾಗಿದ್ದಾರೆ ಎಂದು ಹುಡುಕುತಿದ್ದರೆ ಅವರು ಮಂಗಳೂರಿಗೆ ಬಂದು ರಮಾನಾಥ ರೈ ಅವರನ್ನು ಟೀಕಿಸುವುದರಲ್ಲಿ ಮಗ್ನರಾಗಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಮಾತನಾಡಿ ಮಾಜಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ ಅವರು ಕ್ಷುಲ್ಲಕ ಕಾರಣವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ಬಂದ್ ಕರೆ ನೀಡುತ್ತಿವೆ. ಇದರಿಂದ ಶಾಲೆಯ ಮಕ್ಕಳಿಗೆ ಹಾಗೂ ಕೆಲಸಕ್ಕೆ ತೆರಳುವವರಿಗೂ ಸಮಸ್ಯೆಗಳಾಗುತ್ತವೆ. ಸಚಿವ ರಮಾನಾಥ ರೈ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಬಂಟ್ವಾಳದಲ್ಲಿ ಯಾರೇ ಕೂಡ ಅವರಿಗೆ ಕಾರ್ಯಕ್ರಮಗಳಿಗೆ ಕರೆದರೆ ಅವರ ಮನೆಗಳಿಗೆ ತೆರಳಿ ಊಟ ಮುಗಿಸಿ ಬರುತ್ತಾರೆ. ಅವರು ಎಂದಿಗೂ ಯಾವುದೇ ಜಾತಿಯನ್ನು ಧರ್ಮವನ್ನು ಕೀಳು ದೃಷ್ಟಿಯಿಂದ ಕಂಡಿಲ್ಲ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯನ್ನು ಪ್ರವಾಸಿ ಬಂಗಲೆಗೆ ಕರೆಸಿ ಮಾತನಾಡಿದ್ದನ್ನೇ ವಿಷಯವಾಗಿಸಿಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಒರ್ವ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ಎಸ್ಪಿಯವರನ್ನು ಕರೆಸಿ ಮಾತನಾಡುವ ಅಧಿಕಾರ ಅವರಿಗಿದೆ ಎಂದರು.

ಕಾರ್ತಿಕ್ ರಾಜ್ ಅವರ ಕೊಲೆ ನಡೆದಾಗ ಈ ಭಾಗದ ಸಂಸದರು ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿದಾಗ ಕಾಂಗ್ರೆಸ್ ಇದನ್ನು ದೊಡ್ಡ ವಿಷಯವಾಗಿ ಮಾಡಿಲ್ಲ. ಆದರೆ ರಮಾನಾಥ ರೈ ಅವರ ವಿಷಯವನ್ನು ದೊಡ್ಡ ವಿಷಯವನ್ನಾಗಿಸುತ್ತಾರೆ ಎಂದರು.


Spread the love