ತಾಪಂ, ಜಿಪಂ ಚುನಾವಣೆಯಲ್ಲಿ ಉಡುಪಿ ಮನಪಾಗೆ ಸೇರಿಸಲು ಉದ್ದೇಶಿಸಿರುವ ಗ್ರಾಪಂಗಳನ್ನು ಕೈಬಿಡಿ – ಯಶ್ಪಾಲ್ ಸುವರ್ಣ
ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಪಾಲಿಕೆಗೆ ಸೇರಿಸಲು ಉದ್ದೇಶಿಸಿರುವ 9 ಗ್ರಾಮ ಪಂಚಾಯತ್ ಗಳನ್ನು ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೈಬಿಡುವಂತೆ ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲಾಡಳಿತ ಮಹಾನಗರ ಪಾಲಿಕೆ ರಚನೆ ಬಗ್ಗೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಅಂಕಿ ಸಂಖ್ಯೆಗಳ ಸಂಗ್ರಹಣೆ, ಜನಾಭಿಪ್ರಾಯ ಮತ್ತು ಸ್ಥಳೀಯ ಆಡಳಿತಗಳ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಈಗಾಗಲೇ ಅವಧಿ ಪೂರ್ಣಗೊಂಡಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಮುಂಬರುವ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಸಲು ನಿರ್ಧರಿಸಿರುವುದಾಗಿ ತಿಳಿದು ಬಂದಿರುತ್ತದೆ. ಸದ್ರಿ ಚುನಾವಣೆ ಘೋಷಣೆ ಸಂದರ್ಭದಲ್ಲಿ ಪ್ರಸ್ತುತ ಉದ್ದೇಶಿತ ಉಡುಪಿ ಮಹಾನಗರ ಪಾಲಿಕೆಗೆ ಸೇರಿಸಲು ಹೊರಟಿರುವ ಗ್ರಾಮ ಪಂಚಾಯತಿಗಳನ್ನು ಕೈ ಬಿಡುವ ಅಗತ್ಯವಿದೆ.
ಉಡುಪಿ ನಗರಸಭೆಯ ಅವಧಿಯು ಇನ್ನು 8 ತಿಂಗಳುಗಳಲ್ಲಿ ಮುಕ್ತಾಯಗೊಳ್ಳಲಿದೆ. ಇದರಿಂದಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಅನಗತ್ಯ ವೆಚ್ಚವನ್ನು ತಡೆಯಬಹುದಾಗಿದೆ.
ಆದುದರಿಂದ, ಉಡುಪಿ ತಾಲೂಕಿನ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ 9 ಗ್ರಾಮ ಪಂಚಾಯತ್ ಗಳಾದ ಅಲೆವೂರು, ಉದ್ಯಾವರ, ಕಡೆಕಾರ್, ಅಂಬಲಪಾಡಿ, ತೆಂಕನಿಡಿಯೂರು, ಬಡನಿಡಿಯೂರು, ಕೆಮ್ಮಣ್ಣು, ಕಲ್ಯಾಣಪುರ, 80 ಬಡಗ ಬೆಟ್ಟು ಗ್ರಾಮ ಪಂಚಾಯತಿಗಳ ವ್ಯಾಪ್ತಿಯನ್ನು ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಹೊರತು ಪಡಿಸಿ ಚುನಾವಣೆ ನಡೆಸುವಂತೆ ಶಾಸಕರು ಮನವಿ ಮಾಡಿದ್ದಾರೆ.