ತಾರಕಕ್ಕೇರಿದ ಕಾಂಗ್ರೆಸ್- ಬಿಜೆಪಿ ‘ಚೌಕಿದಾರ್’ ಸ್ಟಿಕ್ಕರ್ ಜಗಳಕ್ಕೆ ತೆರೆ ಹಾಕಿದ ಚುನಾವಣಾ ಆಯೋಗ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ‘ಮೈ ಭೀ ಚೌಕಿದಾರ್’ ಆಂದೋಲನಕ್ಕೆ ಪ್ರತಿಯಾಗಿ ಕಾಂಗ್ರೆಸ್ನ ‘ಚೌಕಿದಾರ್ ಚೋರ್ ಹೈ’ ಚಳವಳಿ ವೈಯಕ್ತಿಕ ಘರ್ಷಣೆಯ ಹಂತಕ್ಕೆ ತಲುಪಿದ್ದನ್ನು ಗಮನಿಸಿದ ಚುನಾವಣಾ ಆಯೋಗ ಕೊನೆಗೂ ಎರಡೂ ಪಕ್ಷಗಳ ಕಾರುಗಳ ಮೇಲೆ ಹಾಕಲಾದ ಸ್ಟಿಕ್ಕರ್ ತೆಗೆಯುವುದರ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.
ನರೇಂದ್ರ ಮೋದಿಯವರು ಮೈ ಭೀ ಚೌಕಿದಾರ್ ಆಂದೋಲನ ಆರಂಭಿ ಸಿದ ಬಳಿಕ ಬಿಜೆಪಿ ನಾಯಕರು, ಕಾರ್ಯಕರ್ತರು, ಮೋದಿ ಅಭಿಮಾನಿಗಳು ತಮ್ಮ ವಾಟ್ಸ್ಯಾಪ್ ಡಿಪಿ, ಟ್ವಿಟರ್ ಸಹಿತ ವಾಹನಗಳಲ್ಲಿ ‘ಮೈ ಭೀ ಚೌಕಿದಾರ್’ ಘೋಷಣೆಯ ಸ್ಟಿಕ್ಕರ್ ಗಳನ್ನು ಹಾಕಿಕೊಂಡಿದ್ದರು .
ಈ ಮಧ್ಯೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಸ್ಛೂರ್ತಿ ಪಡೆದ ಕಾಂಗ್ರೆಸಿಗರು ತಮ್ಮ ವಾಹನಗಳಲ್ಲಿ ‘ಚೌಕಿದಾರ್ ಚೋರ್ ಹೈ’ ಸ್ಟಿಕ್ಕರ್ ಅಳವಡಿಸಿದ್ದು ಬಿಜೆಪಿಗರ ಕಣ್ಣು ಕೆಂಪಗಾಗಿಸಿತ್ತು. ಇದರ ಪರಿಣಾಮ ಎರಡು ಪಕ್ಷಗಳ ಕಾರ್ಯಕರ್ತರು ಪರಸ್ಪರ ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕವಾಗಿ ಟೀಕಿಸಿಕೊಳ್ಳುವ ಹಂತಕ್ಕೆ ತಲುಪಿತ್ತು.
ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರು ಕೂಡಲೇ ಎರಡು ಪಕ್ಷದ ನಾಯಕರು, ಕಾರ್ಯಕರ್ತರುಗಳ ವಾಹನಗಳ ಮೇಲೆ ಇರುವ ಸ್ಟಿಕ್ಕರ್ ತೆಗೆಯಲು ಸೂಚಿಸಿದ್ದರು ಅದರಂತೆ ಫ್ಲೈಯಿಂಗ್ ಸ್ಕ್ವ್ಯಾಡ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ.