ತಾರಸಿ ತೋಟಗಳು ಉಡುಪಿಯಲ್ಲಿ ನಳನಳಿಸಲಿ- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ : ನಗರದಲ್ಲಿ ಭೂಮಿ ಕೊರತೆ ಇರುವುದರಿಂದ ಉಡುಪಿ ನಗರವ್ಯಾಪ್ತಿಯ ಟೆರೆಸ್ ಹೊಂದಿರುವ ಮಹಿಳೆಯರು ತರಕಾರಿ ಹಾಗೂ ಹಣ್ಣನ್ನು ತಮ್ಮ ಮನೆಯ ತಾರಸಿಯ ಮೇಲೆ ಬೆಳೆಯಲಿ; ಇದು ಆರೋಗ್ಯಕ್ಕೂ ಉತ್ತಮ ಎಂದು ಮೀನುಗಾರಿಕೆ, ಯುವಜನಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.
ತೋಟಗಾರಿಕೆ ಇಲಾಖೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ಆಯೋಜಿಸಿದ್ದ ತಾರಸಿ ತೋಟ ಹಾಗೂ ಕೈತೋಟ ಉತ್ತೇಜನಾ ಕಾರ್ಯಕ್ರಮ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾವಯವ ಕೃಷಿ, ಕೀಟನಾಶಕದಿಂದ ಹೊರತಾದ ತೋಟಗಳ ನಿರ್ಮಾಣಕ್ಕೆ ಇಲಾಖೆ ಸಹಕಾರ ನೀಡುತ್ತಿದ್ದು, ಸ್ವಯಂ ಸೇವಾ ಸಂಸ್ಥೆಗಳ ನೆರವಿನಿಂದ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಲಿ; ಸರ್ಕಾರದ ಯೋಜನೆಗಳು ಜನಪರವಾಗಿ ಅನುಷ್ಠಾನಕ್ಕೆ ಬರಲಿ ಎಂದು ಸಚಿವರು ಹೇಳಿದರು.
ಮುಖ್ಯ ಅತಿಥಿಯಾಗಿ ಸಂದೇಶ ನೀಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಶೆಟ್ಟಿ ಅವರು, ಮಹಿಳೆಯರಿಗೆ ತೋಟದ ಅಭಿರುಚಿ, ಆರೋಗ್ಯಕ್ಕೆ, ಆರ್ಥಿಕತೆಗೆ ನೆರವಾಗಲಿದೆ. ಮಕ್ಕಳ ಜೊತೆಗೆ ಗಿಡಗಳನ್ನೂ ಬೆಳೆಸಿ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ಮಾತನಾಡಿ, ಮನೆಯಲ್ಲೇ ತರಕಾರಿ ಬೆಳೆಯುವುದರಿಂದ ತಾಜಾ, ಆರೋಗ್ಯಕರ ತರಕಾರಿ ಲಭ್ಯತೆ ಜೊತೆಗೆ ನಾವೇ ಬೆಳೆದ ಹೆಮ್ಮೆ ನಮಗೆ ಖುಷಿಯನ್ನು ನೀಡಲಿದೆ ಎಂದರು.
ಇನ್ನೋರ್ವ ಅತಿಥಿ ಉಡುಪಿ ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ಅವರು, 35 ವಾರ್ಡುಗಳಿಗೂ ತರಬೇತಿ ದೊರೆಯಲಿದ್ದು, ಇದರಲ್ಲೂ ಉಡುಪಿ ಪ್ರಥಮವನ್ನು ಸಾಧಿಸಲಿ ಎಂದರು. ಪ್ರಾದೇಶಿಕ ನಿರ್ದೇಶಕ ಎಸ್ ಕೆ ಡಿಆರ್ ಡಿಪಿಯ ಮಹಾವೀರ ಅಜ್ರಿಯವರು, ಯೋಜನೆಗಳ ಸದ್ಬಳಕೆಗೆ ಫಲಾನುಭವಿಗಳ ಸಹಕಾರದ ಅಗತ್ಯವನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು, ತರಬೇತಿಯಿಂದ ಮಹಿಳೆಯರು ಅಭಿವೃದ್ಧಿ ಹೊಂದಲಿ; ಮಾಹಿತಿಯಿಂದ ಮಹಿಳೆಯರು ಶಕ್ತಿ ಪಡೆಯಲಿ ಎಂದು ಶುಭ ಹಾರೈಸಿದರು.
ತೋಟಗಾರಿಕೆ ಉಪನಿರ್ದೇಶಕರಾದ ಭುವನೇಶ್ವರಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ತೋಟಗಾರಿಕೆ ಇಲಾಖೆಯ ಸಂಜೀವ್ ನಾಯಕ್ ಅವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆವಿಕೆ ಬ್ರಹ್ಮಾವರದ ಕಾರ್ಯಕ್ರಮ ಸಂಯೋಜಕ ಡಾ ಬಿ ಧನಂಜಯ, ವಿಷಯ ತಜ್ಞ ಡಾ ಚೈತನ್ಯ ಇವರು ಮಾಹಿತಿಯನ್ನು ನೀಡಿದರು. ಮಾಹಿತಿಯನ್ನೊಳಗೊಂಡ ಇಲಾಖಾ ಕೈಪಿಡಿಗಳನ್ನು ಈ ಸಂದರ್ಭದಲ್ಲಿ ಸಚಿವರು ಮತ್ತು ಅತಿಥಿಗಳು ಬಿಡುಗಡೆ ಮಾಡಿದರು.